ನೈತಿಕತೆ ಅಧಃಪತನಕ್ಕೆ ಇಳಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಕೊಡುಗೆ ನೀಡಿದ ಶಿಕ್ಷಕ, ದಾರ್ಶನಿಕ, ದೇಶದ ಮೊದಲ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನಾದರ್ಶಗಳು ಪ್ರಸ್ತುತವಾಗುತ್ತವೆ ಎಂದು ಶಾಸಕ ಎನ್.ಎನ್.ಚನ್ನಬಸಪ್ಪ ಅವರು ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿವಮೊಗ್ಗ ಮಹಾನಗರಪಾಲಿಕೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ಉಜ್ವಲ ಭವಿಷ್ಯಕ್ಕೆ ಶಿಕ್ಷಕರ ಮಹತ್ವವನ್ನು ಚೆನ್ನಾಗಿ ಅರಿತಿದ್ದ ರಾಧಾಕೃಷ್ಣನ್‌ಅವರು ಮಹಾನ್‌ಸಾಧಕರಲ್ಲಿ ಮೇಲ್ಪಂಕ್ತಿಯಲ್ಲಿ ಗುರುತಿಸಿಕೊಳ್ಳುವವರಾಗಿದ್ದಾರೆ ಎಂದವರು ನುಡಿದರು.
ದೇಶವನ್ನು ಮಾದರಿಯಾಗಿ ನಿರ್ಮಿಸುವಲ್ಲಿ ಟೊಂಕಕಟ್ಟಿ ನಿಲ್ಲುವ ಪ್ರತಿ ವ್ಯಕ್ತಿಯ ಹಿಂದೆ ಓರ್ವ ಆದರ್ಶ ಶಿಕ್ಷಕನ ನೆರಳಿರುವುದನ್ನು ಮರೆಯಲಾಗದು ಎಂದ ಅವರು, ಶಿಕ್ಷಣ ಮತ್ತು ಶಿಕ್ಷಕ ಪ್ರಧಾನವಾಗಿ ಗುರುತಿಸಲ್ಪಡುತ್ತಾರೆ ಎಂದರು.
ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ವ್ಯವಸ್ಥೆಯ ನಡುವೆ ಸಂಘರ್ಷ ಕಂಡುಬರುತ್ತಿದೆ. ಈ ವಿಷಯದ ಕುರಿತು ಗಂಭೀರಸ್ವರೂಪದ ಚರ್ಚೆಗಳು ನಡೆದು ಅಂತಿಮವಾಗಿ ಶಿಕ್ಷಣಕ್ಕೆ ಪ್ರಾಧಾನ್ಯತೆ ದೊರೆಯುವಂತಾಗಬೇಕು, ಜನಸಾಮಾನ್ಯರಿಗೆ ಉನ್ನತ ಶಿಕ್ಷಣ ದೊರೆಯುವಂತಾಗಬೇಕು ಎಂದ ಅವರು, ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಸಲ್ಲದು ಎಂದ ಅವರು, ಇಂದಿನ ಪ್ರತಿ ವಿದ್ಯಾರ್ಥಿಗಳು ದೇಶದ ಭವಿಷ್ಯ ನಿರ್ಮಿಸುವ ವಿಶೇಷ ವ್ಯಕ್ತಿತ್ವದ ವ್ಯಕ್ತಿಗಳಾಗಿ ಹೊರಹೊಮ್ಮಬೇಕೆಂದವರು ನುಡಿದರು.
ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ರಾಧಾಕೃಷ್ಣನ್‌ಅವರು ಭಾರತ ರತ್ನ ಪದವಿಯವರೆಗೆ ಏರಿದ್ದು, ಹರ್ಷದಾಯಕ ಸಂಗತಿ. ಆವ್ಯಕ್ತಿತ್ವದ ಹಿಂದಿನ ಶಕ್ತಿ ಶಿಕ್ಷಕರೇ ಆಗಿದ್ದರು ಎಂಬುದು ಗಮನಾರ್ಹ ಎಂದ ಅವರು, ಜಿಲ್ಲೆಯಲ್ಲಿ ಪ್ರತಿಭಾವಂತ ಶಿಕ್ಷಕರನ್ನು ಗುರುತಿಸಿ, ಗೌರವಿಸುತ್ತಿರುವುದು ಸಂತಸದ ಸಂಗತಿಯಾದರೂ ಮುಂದಿನ ದಿನಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು ಸಲ್ಲುವಂತಾಗಬೇಕೆಂದವರು ಆಶಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್‌ಸದಸ್ಯೆ ಶ್ರೀಮತಿ ಬಲ್ಕೀಸ್‌ಬಾನು ಅವರು ಮಾತನಾಡಿ, ಪ್ರವರ್ಧಮಾನಕ್ಕೇರಿದ ಪ್ರತಿ ವ್ಯಕ್ತಿಯ ಬೆಳವಣಿಗೆ ಮತ್ತು ಆತನ ಸಾಧನೆಯ ಹಿಂದೆ ಶಿಕ್ಷಕರ ಅರ್ಪಣಾ ಭಾವವನ್ನು ನೆನಪಿಸಿಕೊಳ್ಳಬೇಕು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜಕಾರಣಿಗಳ ಜೊತೆಜೊತೆಗೆ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿತ್ತು ಎಂದರು.
ಶಿಕ್ಷಕರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿನ ಬೆಳವಣಿಗೆಗಳನ್ನು ಸಮೀಪದಿಂದ ಬಲ್ಲವರಾಗಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಶಿಕ್ಷಕರು ಮಕ್ಕಳಲ್ಲಿ ಅಭಿಮಾನ ಮೂಡುವಂತೆ ನೋಡಿಕೊಳ್ಳಬೇಕು. ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿನ ಸಾಧಕರು ಶಿಕ್ಷಕರ ಮಾರ್ಗದರ್ಶನದಿಂದಲೇ ಗುರುತಿಸಿಕೊಂಡವರಾಗಿರುತ್ತಾರೆ ಎಂದರು.
ಸಮಾಜದಲ್ಲಿ ಅಲ್ಲಲ್ಲಿ ಕಂಡುಬರುವ ಮೌಢ್ಯ, ಡಂಬಾಚಾರಗಳನ್ನು ತೊಲಗಿಸುವ ನಿಟ್ಟಿನಲ್ಲಿ ಶಿಕ್ಷಕರು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು. ಬಾಲ್ಯವಿವಾಹ, ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವಲ್ಲಿ ಸರ್ಕಾರದೊಂದಿಗೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಶಿಕ್ಷಣ ಮತ್ತು ಶಿಕ್ಷಕರ ವೃತ್ತಿ ಅತ್ಯಮೂಲ್ಯವಾದುದು ಎಂದರು.
ಶಿಕ್ಷಕರ ವಿನಃ ಸ್ವಾಸ್ಥ್ಯ ಸಮಾಜ ನಿರ್ಮಾಣ ಅಸಾಧ್ಯ. ಪ್ರತಿಭಾವಂತ ಶಿಕ್ಷಕರೇ ಸರ್ಕಾರಿ ಶಾಲೆಗಳಲ್ಲಿದ್ದಾರೆ. ಶಿಕ್ಷಕರು ಸರ್ಕಾರಿ ಶಾಲೆಗಳ ಉನ್ನತಿ ಬಗ್ಗೆ ವಿಶೇಷ ಗಮನಹರಿಸಬೇಕೆಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಇತ್ತೀಚಿನ ಒತ್ತಡದ ಬದುಕು ಹಾಗೂ ಕೌಟುಂಬಿಕ ಸಮಸ್ಯೆಗಳ ನಡುವೆಯೂ ಉತ್ತಮ ಸಮಾಜವನ್ನು ಕಟ್ಟುವುದು ಶಿಕ್ಷಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಶಿಕ್ಷಕರ ವರ್ಗಾವಣೆ ಸಮಯದಲ್ಲಿ ಮಕ್ಕಳು ಕಣ್ಣೀರಾಗುವುದನ್ನು ನೋಡಿದರೆ ಸರ್ಕಾರಿ ಶಾಲೆಗಳಲ್ಲಿ ಇನ್ನು ಶಿಕ್ಷಣದ ಮೌಲ್ಯ ಉಳಿದಿದೆ ಎನಿಸುತ್ತದೆ. ವಿದ್ಯಾರ್ಥಿಗಳು ನನ್ನ ಮಕ್ಕಳ ರೀತಿಯಲ್ಲಿ ಬೆಳೆಯಬೇಕು ಎನ್ನುವ ಶಿಕ್ಷಕರ ನಿಸ್ವಾರ್ಥ ಸೇವೆ, ಇದು ನಮ್ಮ ಶಾಲೆ ನಮ್ಮ ಮಕ್ಕಳು ಎಂಬ ಮನೋಭಾವ ಪ್ರಶಂಸನಾರ್ಹ ಎಂದರು.
ಶಿಕ್ಷಕರು ಕೇವಲ ಶಿಕ್ಷಕರ ಕೆಲಸ ಮಾತ್ರವಲ್ಲದೆ ಶಿಕ್ಷಕರೇತರ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಅನೇಕ ಒತ್ತಡಗಳಿಗೆ ಅಂಜದೆ ಕಾಯಕವೇ ಕೈಲಾಸ ಎಂಬ ಬಸವಣ್ಣನ ಆಶಯದಂತೆ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಶಿಕ್ಷಕರ ವೃತ್ತಿ ಗೌರವವನ್ನು ಎತ್ತಿ ಹಿಡಿಯುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಜ್ಞಾನದ ಯುಗ. ಜ್ಞಾನದಿಂದ ವಿಜ್ಞಾನ ವಿಜ್ಞಾನದಿಂದ ತಂತ್ರಜ್ಞಾನ ರೂಪಕೊಂಡಿದೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಕರು ಕೆಲಸ ಮಾಡಬೇಕಾಗಿದೆ ಎಂದರು.
ಸೂಡಾ ಅಧ್ಯಕ್ಷ ಸುಂದರೇಶ್‌ಅವರು ಮಾತನಾಡಿ, ಬಹುತೇಕರಿಗೆ ಶಿಕ್ಷಣ ಮತ್ತು ಶಿಕ್ಷಕರ ಮೌಲ್ಯ ಅವರ ಮಹತ್ವ ತಿಳಿದಿಲ್ಲ. ಪೋಷಕರ ನಂತರ ಶಿಕ್ಷಕರ ಸ್ಥಾನ ಹೆಚ್ಚಿನ ಮಹತ್ವ ಪಡೆದಿದೆ. ಶಿಕ್ಷಕರು ಸಮಾಜದ ಶಿಲ್ಪಿಗಳು ಎಂದವರು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ ಪ್ರತಿಭಾವಂತ ಶಿಕ್ಷಕರು, ಸುದೀರ್ಘ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರನ್ನು ಗುರುತಿಸಿ, ಗೌರವಿಸಲಾಯಿತು.
ಸಮಾರಂಭದಲ್ಲಿ ಸಾಹಿತಿ, ಚಿಂತಕ ವೈ.ವಿ.ಗುಂಡೂರಾವ್‌ಅವರು ಶಿಕ್ಷಕರು ಕೈಗೊಳ್ಳಬಹುದಾದ ಪರಿಣಾಮಕಾರಿ ಬೋಧನಾ ವಿಧಾನಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಧು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ರುದ್ರಪ್ಪ, ಧರ್ಮಪ್ಪ, ದಿನೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಮತ್ತಿತರರು ಉಪಸ್ಥಿತರಿದ್ದರು.