
18 ವರ್ಷದೊಳಗಿನ ಮಕ್ಕಳ ಬಾಲ್ಯವಿವಾಹ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇತ್ತಿಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದರಿಂದ ಶಿವಮೊಗ್ಗ ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ “ಮಿಷನ್ ಸುರಕ್ಷಾ” ಅಭಿಯಾನದ ಮೂಲಕ ತಾಲ್ಲೂಕಿನಾದ್ಯಂತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದಡಿ ಬಾಲ್ಯವಿವಾಹ ನಿಷೇಧ ಕಾಯ್ದೆ 2006 ಮತ್ತು ಪೋಕ್ಸೋ ಕಾಯ್ದೆ 2012 ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ವಯೋಮಾನವನ್ನು ವಿವಾಹಕ್ಕೆ ನಿಗದಿಪಡಿಸಿದ್ದು ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ, ಬಾಲಗರ್ಭಿಣಿ ಹಾಗೂ ಪೋಕ್ಸೋ ಪ್ರಕರಣಗಳು ಕಂಡು ಬಂದಲ್ಲಿ 1098 ಮಕ್ಕಳ ಸಹಾಯವಾಣಿ ಅಥವಾ ಗ್ರಾಮ ಮಟ್ಟದಲ್ಲಿ ಪಂಚಾಯಿತಿ ಪಿ.ಡಿ.ಓ, ಶಾಲಾ ಮುಖ್ಯೋಪಾದ್ಯಾಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಅಥವಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತಿಳಿಸಬಹುದಾಗಿದೆ.