
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ, ಇವರ ವತಿಯಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರ ಸಹಯೋಗದೊಂದಿಗೆ “ವೀರ್ ಪರಿವಾರ್ ಸಹಾಯತಾ ಯೋಜನಾ -2025” ರ ಅಡಿಯಲ್ಲಿ ಉಚಿತ ಕಾನೂನು ನೆರವು ಸೇವಾ ಕೇಂದ್ರ (ಕ್ಲಿನಿಕ್)ವನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಛೇರಿ, ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ ಇಲ್ಲಿ ಆರಂಭಿಸಲಾಗಿದೆ.

ರಕ್ಷಣಾ ಇಲಾಖೆಯ ಸಿಬ್ಬಂದಿಗಳು, ವೀರ ನಾರಿಯರು, ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಉಂಟಾಗಬಹುದಾದ ಕಾನೂನು ಸಮಸ್ಯೆಗಳಿಗೆ ನೆರವು ಮತ್ತು ಅರಿವುಗಳನ್ನು ಉಚಿತವಾಗಿ ನೀಡುವ ಯೋಜನೆ ಇದಾಗಿದ್ದು. ಶಿವಮೊಗ್ಗ-ಚಿತ್ರದುರ್ಗ-ದಾವಣಗೆರೆ ಜಿಲ್ಲೆಗಳ ವೀರ ನಾರಿಯರು, ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಹಾಗೂ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರು, ನಿವೃತ್ತರು ಈ ಯೋಜನೆಯ ಬಗ್ಗೆ ತಿಳಿದುಕೊಂಡು ತಮ್ಮ ಕಾನೂನಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಸದ್ಯಕ್ಕೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಛೇರಿಯಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸಿದ್ದು, ಈ ಕಾನೂನು ನೆರವು ಕೋಶವನ್ನು ಪ್ರತಿ ಬುಧವಾರದಂದು ಬೆಳಿಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ ನಿವೃತ್ತ ಸೈನಿಕ, ಕಾನೂನು ತಜ್ಞ ಹಾಗೂ ಕ್ಲಿನಿಕ್ ಪ್ಯಾನೆಲ್ ವಕೀಲರಾಗಿರುವ ಡಾ. ಎಚ್.ಎಂ ನಟರಾಜರವರು ಉಚಿತವಾಗಿ ನಡೆಸಿಕೊಡುತ್ತಾರೆ.
ಅಗತ್ಯಕ್ಕನುಸಾರ ಸೇವಾವಧಿ ಮತ್ತು ಕಛೇರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳು, ಹೊಸದಾಗಿ ದಾಖಲಿಸಬೇಕಾದ ಪ್ರಕರಣಗಳು, ನಿವೃತ್ತಿ ವೇತನ, ಭೂವ್ಯಾಜ್ಯ, ಕೌಟುಂಬಿಕ ವಿವಾದಗಳು, ಸ್ಥಿರ-ಚರ ಆಸ್ತಿ ವಿವಾದ, ಉತ್ತರಾಧಿಕಾರದ ಹಕ್ಕು-ಬಾಧ್ಯತೆಗಳ ಸಮಸ್ಯೆ ಇತ್ಯಾದಿಗಳ ಕುರಿತು ಈ ಕೋಶದಲ್ಲಿ ಯಾವುದೇ ಶುಲ್ಕವಿಲ್ಲದೇ ಕಾನೂನು ಸಹಾಯವನ್ನು ನೀಡಲಾಗುತ್ತದೆಂದು ಉಪನಿರ್ದೇಶಕರು (ಪ್ರ), ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ತಿಳಿಸಿದ್ದಾರೆ.