
ಮೂಕ ಪ್ರಾಣಿಗಳ ವೈದ್ಯರಾದ ಪಶುವೈದ್ಯರು ದಿನನಿತ್ಯ ಪಶುಗಳು ಮತ್ತು ಮನುಷ್ಯರ ಜೊತೆ ಬೆರೆಯುವುದರಿಂದ ಇವರ ಸಾಹಿತ್ಯವು ಅತ್ಯಂತ ಶ್ರೇಷ್ಟ ಮಟ್ಟಕ್ಕೆ ಬೆಳೆಯವ ಮಟ್ಟದ್ದು ಮತ್ತು ಈ ಕುರಿತು ಪಶುವೈದ್ಯರು ಇನ್ನೂ ಹೆಚ್ಚಿನ ಅಧ್ಯಯನ ಮಾಡಿ ಸಾಹಿತ್ಯ ಲೋಕಕ್ಕೆ ಹತ್ತಿರವಾದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದು ವಿಮರ್ಶಕರು ಹಾಗೂ ಸಾಹಿತಿ ಟಿ.ಪಿ.ಅಶೋಕ್ ಹೇಳಿದರು.

ಅವರು ಕನ್ನಡ ಪಶುವೈದ್ಯಕೀಯ ಸಾಹಿತ್ಯ ಪರಿಷತ್ (ರಿ), ಕರ್ನಾಟಕ, ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಮತ್ತು ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರ ಸಹಯೋಗದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಕನ್ನಡ ಪಶುವೈದ್ಯಕೀಯ ಸಾಹಿತ್ಯ ಪರಿಷತ್ ವತಿಯಿಂದ 2 ದಿನಗಳ ರಾಜ್ಯಮಟ್ಟದ “ಕನ್ನಡ ಭಾಷೆ, ಸಾಹಿತ್ಯ ಮತ್ತು ಪಶುವೈದ್ಯಕೀಯ ವಿಜ್ಞಾನ” ವಿಷಯದ ಬಗ್ಗೆ ಹಮ್ಮಿಕೊಂಡಿದ್ದ ಸಾಹಿತ್ಯ ಕಮ್ಮಟ-2025ವನ್ನು ಉದ್ಘಾಟಿಸಿ ಮಾತನಾಡಿದರು.
ಡಾ: ಎನ್.ಬಿ.ಶ್ರೀಧರ ಇವರ ನವಕರ್ನಾಟಕ ಪ್ರಕಾಶನದ ಕೃತಿ “ಪಶುವೈದ್ಯನ ಪಯಣ: ಪಶುವೈದ್ಯಕೀಯ ವೃತ್ತಿಯ ಅನುಭವಗಳು” ಇದನ್ನು ಬಿಡುಗಡೆ ಮಾಡಲಾಯಿತು.
ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಭಾರಿ ಡೀನ್, ಡಾ ತಿರುಮಲೇಶ್ ಮಾತನಾಡುತ್ತಾ ಕನ್ನಡ ಭಾಷೆಯ ಗರಿಮೆ, ಪಶುವೈದ್ಯಕೀಯ ವೃತ್ತಿಯವರು ಇದನ್ನು ಅಳವಡಿಸಿಕೊಳ್ಳುವ ವಿಧಾನಗಳ ಮಹತ್ವ ತಿಳಿಸಿದರು.
ಕನ್ನಡ ಪಶುವೈದ್ಯಕೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ: ಎಸ್. ಬಿ.ರವಿಕುಮಾರ್ ಮಾತನಾಡಿ ಪಶುವೈದ್ಯರಿಗೆ ದಿನನಿತ್ಯದ ವೃತ್ತಿಯ ಜೀವನದಲ್ಲಿ ಜನ ಮತ್ತು ಪಶುಗಳ ನಿಕಟ ಸಂಪರ್ಕವಿರುವುದರಿAದ ಸಾಹಿತ್ಯಕ್ಕೆ ವಸ್ತುಗಳು ಲಭ್ಯತೆ ಸುಲಭ, ಹೆಚ್ಚಿನ ಪಶುವೈದ್ಯರು ಬರವಣಿಗೆಯಲ್ಲಿ ತೊಡಗಿಸಿಕೊಂಡು ವೃತ್ತಿಯ ಕುರಿತು ಜನಮಾನಸ ತಲುಪಬೇಕೆಂದರು.
ಸಮಾರಂಭದಲ್ಲಿ ಶಿವಮೊಗ್ಗದ ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ:ಬಾಬುರತ್ನ, ಪಶುವೈದ್ಯಕೀಯ ಸಾಹಿತಿ ಡಾ: ರಮಾನಂದ ಕಾರ್ಯಕ್ರಮದ ಸಂಘಟಕರಾದ ಡಾ: ಎನ್.ಬಿ,ಶ್ರೀಧರ ಮತ್ತು ಡಾ: ರವಿಕುಮಾರ್,ಪಿ. ಇವರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದ 48 ಪಶುವೈದ್ಯಾಧಿಕಾರಿಗಳು ಮತ್ತು ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.