ಪೌರ ಕಾರ್ಮಿಕರು ಕಠಿಣಶ್ರಮದಿಂದ ನಮ್ಮ ನಗರವನ್ನು ಸ್ವಚ್ಛವಾಗಿಡುತ್ತಿದ್ದಾರೆ. ಕೊರೋನಾದಂತಹ ಭೀಕರ ಸಂದರ್ಭದಲ್ಲೂ ಪೌರ ಕಾರ್ಮಿಕರು ಜೀವದ ಹಂಗುತೊರೆದು ನಮ್ಮ ಆರೋಗ್ಯವನ್ನು ರಕ್ಷಿಸಿದ್ದಾರೆ. ಅವರ ಎಲ್ಲಾ ರೀತಿಯ ಕಷ್ಟ ನನಗೆ ಗೊತ್ತಿದೆ ಆದ್ದರಿಂದ ಪ್ರತಿವರ್ಷದಂತೆ ಈ ವರ್ಷವೂ ಅವರಿಗೆ ಒಬ್ಬ ಅಣ್ಣನಾಗಿ ಸದ್ಭಾವನಾ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ವತಿಯಿಂದ ಸೀರೆಗಳನ್ನು ವಿತರಿಸುತ್ತಿರುವುದಾಗಿ ಕಾಂಗ್ರೆಸ್ ಮುಖಂಡ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ. ಶ್ರೀಕಾಂತ್ ಹೇಳಿದ್ದಾರೆ.
ಅವರು ನಗರದ ಸರ್ಕಾರಿ ನೌಕರರ ಭವನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಸೀರೆಯನ್ನು ವಿತರಿಸಿ ಮಾತನಾಡಿ, ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಕಳೆದ 28 ವರ್ಷಗಳಿಂದ ನನ್ನ ಕೈಲಾದಷ್ಟು ನೆರವು ನೀಡುತ್ತಿದ್ದೇನೆ. ನನ್ನ ವಿನಂತಿ ಏನೆಂದರೆ ಪ್ರತಿಯೊಬ್ಬ ಹೆಣ್ಣುಮಕ್ಕಳು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಅವರಿಗೆ ಒಳ್ಳೆಯ ಭವಿಷ್ಯವಿದೆ. ನನ್ನ ಬಾಂಧವ್ಯ ಮತ್ತು ನೆರವು ಸದಾ ನಿಮ್ಮ ಜೊತೆಗಿರುತ್ತದೆ.
ಇದು ಯಾವುದೇ ಚುನಾವಣೆಯ ದೃಷ್ಟಿಯಿಂದ ಅಲ್ಲ, ಕಾಂಗ್ರೆಸ್ ಸರ್ಕಾರ ಬಡವರಿಗೆ ಅನೇಕ ಯೋಜನೆಗಳನ್ನು ನೀಡಿದೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಬಡವರ ಪರ ಇದ್ದಾರೆ. ಮಹಿಳೆಯರಿಗೆ ೧೨ ದಿನಗಳ ವಾರ್ಷಿಕ ರಜೆಯನ್ನು ಘೋಷಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಉಚಿತ ಬಸ್, ೨ಸಾವಿರ ರೂ. ನಗದು, ಉಚಿತ ವಿದ್ಯುತ್ ನೀಡುತ್ತಿದ್ದಾರೆ. ಮುಂದಿನವರ್ಷ ಪುರುಷ ಪೌರ ಕಾರ್ಮಿಕರಿಗೂ ಕೂಡ ಬಟ್ಟೆಯನ್ನು ನೀಡುವುದಾಗಿ ಅವರು ಘೋಷಿಸಿದರು.
ನಗರಸಭಾ ಮಾಜಿ ಸದಸ್ಯೆ ನಿರ್ಮಲಾಕಾಶಿ ಮಾತನಾಡಿ, ಎಂ. ಶ್ರೀಕಾಂತ್ ಅವರು ಬಡವರಿಗಾಗಿ ನಿರಂತರವಾಗಿ ದಾನ, ಧರ್ಮ, ಮಾಡುತ್ತಿದ್ದು, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಮುಂದಿನ ಬಾರಿ ಅವರು ನಮ್ಮ ನಗರದ ಶಾಸಕರಾಗಲಿ ಎಂದು ಹಾರೈಸಿದರು. ಇನ್ನೋರ್ವ ಸದಸ್ಯೆ ರೇಖಾರಂಗನಾಥ್ ಮಾತನಾಡಿ, ಶ್ರೀಕಾಂತಣ್ಣ ಅವರು ಬಡ ಮಹಿಳೆಯರನ್ನು ಗುರುತಿಸಿ ಬಾಗಿನ ಕೊಡುತ್ತಿರುವುದು ಒಂದು ವಿಶೇಷ ಕಾರ್ಯಕ್ರಮವಾಗಿದ್ದು, ನಮ್ಮ ತವರುಮನೆಯಿಂದ ನೀಡುತ್ತಿರುವಷ್ಟು ಸಂತೋಷವಾಗಿದೆ. ಅವರ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂದರು.
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಸತತ ನಾಲ್ಕು ವರ್ಷಗಳಿಂದ ಗೌರಿ ಹಬ್ಬದ ಸಂದರ್ಭದಲ್ಲಿ ಬಾಗಿನವನ್ನು ನೀಡುತ್ತಿದ್ದರು. ಇದು ನಾಲ್ಕನೇ ಬಾರಿಗೆ ಈ ಬಾರಿ ದೀಪಾವಳಿಗೆ ನೀಡುತ್ತಿದ್ದಾರೆ. ಇದು ಸಾಂಕೇತಿಕ ಕಾರ್ಯಕ್ರಮ ಅಲ್ಲ, ಭಾವನಾತ್ಮಕ ಕಾರ್ಯಕ್ರಮ ಎಂದರು. ವಕೀಲ ಶ್ರೀಪಾಲ್ ಮಾತನಾಡಿ, ಶ್ರೀಕಾಂತ್‌ರವರು. ಅವರಿಂದ ಲಾಭಪಡೆದ ಅನೇಕ ಕುಟುಂಬಗಳು ಮತ್ತು ಅಭಿಮಾನಿಗಳು ಅವರನ್ನು ವಿಧಾನಸೌಧಕ್ಕೆ ಕಳುಹಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ್ ಕಂಕಾರಿ, ಭಾಸ್ಕರ , ಪಾಲಾಕ್ಷಿ, ಹೆಚ್.ಟಿ. ಮಂಜಣ್ಣ, ಗ್ಯಾರಂಟಿ ಸದಸ್ಯ ಬಸವರಾಜ್, ವಿನಯ್ ತಾಂಡ್ಲೆ, ನವುಲೆ ಮಂಜುನಾಥ್, ಮಂಜುನಾಥ್, ಮಾರಪ್ಪ, ವೆಂಕಟಮ್ಮ, ರೇಣುಕಮ್ಮ ಮುಂತಾದವರು ಉಪಸ್ಥರಿದ್ದರು.