ವಿಧಾನಪರಿಷತ್ ಸದನದಲ್ಲಿ ವಿಧಾನಪರಿಷತ್ ಶಾಸಕರಾದ ಡಿ.ಎಸ್. ಅರುಣ್ ಅವರು, ಕಾವೇರಿ–2 ವ್ಯವಸ್ಥೆಯನ್ನು ಇ–ಸ್ವತ್ತು ಜೊತೆ ಸಂಯೋಜಿಸಿದ ನಂತರ ವಿಭಾಗ ಪತ್ರಗಳ ಮೂಲಕ ಆಸ್ತಿ ನೋಂದಣಿಯಲ್ಲಿ ಗಂಭೀರ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದು, ಪಾರಂಪರಿಕ ಆಸ್ತಿಗಳ ವರ್ಗಾವಣೆ ಸಾಧ್ಯವಾಗದೇ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸದನದ ಗಮನಕ್ಕೆ ತಂದರು.

ಎರಡು ಪ್ರಮುಖ ಸಾಫ್ಟ್‌ವೇರ್‌ಗಳ ಸಂಯೋಜನೆ ವೇಳೆ ಸರ್ವರ್ ಸಾಮರ್ಥ್ಯ ಹೆಚ್ಚಿಸದಿರುವುದೇ ಈ ಸಮಸ್ಯೆಗಳ ಮೂಲ ಕಾರಣ ಎಂದು ಅವರು ತಿಳಿಸಿ, ಇದರಿಂದ ಸರ್ಕಾರದ ರಾಜಸ್ವ ಮೂಲಕ್ಕೂ ಧಕ್ಕೆಯಾಗುತ್ತಿದೆ ಎಂದು ಹೇಳಿದರು. ವಿಶೇಷವಾಗಿ ಹಿರಿಯ ನಾಗರಿಕರು ಹಾಗೂ ಮೊದಲ ಬಾರಿಗೆ ಉಪನೋಂದಣಿ ಕಚೇರಿಗೆ ಬರುವವರು ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಡಿ.ಎಸ್. ಅರುಣ್ ಅವರು ಸರ್ಕಾರದ ಗಮನಕ್ಕೆ ತಂದರು.

ಖಾತಾ ವಿಭಜನೆ ಸಂಬಂಧಿತ ಸಮಸ್ಯೆಗಳನ್ನೂ ಪ್ರಸ್ತಾಪಿಸಿ ತಕ್ಷಣ ಪರಿಹಾರಕ್ಕೆ ಆಗ್ರಹಿಸಿದರು,ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು, ಕಾವೇರಿ–2 ಹಾಗೂ ಇ–ಸ್ವತ್ತು ಸಂಯೋಜನೆಯಿಂದ ಉಂಟಾಗಿರುವ ಸರ್ವರ್ ಹಾಗೂ ಖಾತಾ ವಿಭಜನೆ ಸಮಸ್ಯೆಗಳನ್ನು ಒಪ್ಪಿಕೊಳ್ಳುವ ಜೊತೆಯಲ್ಲಿ ಚೆಕ್‌ಬಂದಿ ಪ್ರಕ್ರಿಯೆಯಲ್ಲಿ ನಗರಸಭೆಗಳು ಮುನ್ನಡೆ ವಹಿಸಿ ಸಾರ್ವಜನಿಕರಿಗೆ ಸಹಕಾರ ನೀಡಲು,ಆರ್‌ಡಿಪಿಆರ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪ್ರಸ್ತುತ ಸರ್ವರ್ ಸಮಸ್ಯೆ ಗಂಭೀರವಾಗಿದೆ ಎಂದು ಒಪ್ಪಿಕೊಂಡ ಸಚಿವರು, ಇದನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು.

ಇದಲ್ಲದೆ, ಈ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಡೀಡ್ ರೈಟರ್‌ಗಳಿಗೆ ಫಲಾನುಭವಿಗಳು/ಸಾರ್ವಜನಿಕರ ವಿವರಗಳನ್ನು ಅಪ್‌ಲೋಡ್ ಮಾಡುವ ಅವಕಾಶ ನೀಡುವ ಬಗ್ಗೆ ಸಹ ಪರಿಗಣಿಸಲಾಗುವುದು, ಇದರಿಂದ ಸಾರ್ವಜನಿಕರಿಗೆ ತ್ವರಿತ ಪರಿಹಾರ ದೊರೆಯಲಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ಮಾನ್ಯ ಶಾಸಕರಾದ ಡಿ. ಎಸ್. ಅರುಣ್ ರವರ ಸಲಹೆಯನ್ನು ಸ್ವೀಕರಿಸುವುದಾಗಿ ಸದನಕ್ಕೆ ತಿಳಿಸಿದರು.

Leave a Reply

Your email address will not be published. Required fields are marked *