ಮಂಜುನಾಥ್ ಶೆಟ್ಟಿ
ರಾಜ್ಯದಲ್ಲಿ ಅತಿ ಹೆಚ್ಚು ದಿನಗಳ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ದೇವರಾಜ್ ಅರಸು ಅವರ ದಾಖಲೆಯನ್ನು ಮೀರಿ ಸಿಎಂ ಸಿದ್ದರಾಮಯ್ಯ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದಾದ್ಯಂತ ಉತ್ಸಾಹದಿಂದ ಸಂಭ್ರಮಾಚರಣೆ ನಡೆಸುತ್ತಿದ್ದು, ಶಿವಮೊಗ್ಗದಲ್ಲೂ ವಿಶೇಷವಾಗಿ ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ ನೇತೃತ್ವದಲ್ಲಿ ಬಸ್ಟ್ಯಾಂಡ್ ವೃತ್ತದಲ್ಲಿ ಸಾರ್ವಜನಿಕರಿಗೆ ಬಿರಿಯಾನಿ ಮತ್ತು ಲಡ್ಡು ವಿತರಣೆ ಮಾಡಿದರು.
ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್, “ಅಂದು ದೇವರಾಜ್ ಅರಸು ಬಡವರಿಗೆ ನೆಮ್ಮದಿ ನೀಡಿದವರು. ಇಂದು ಅದೇ ಹಾದಿಯಲ್ಲಿ ಸಿದ್ದರಾಮಯ್ಯ ಜನಪರ ಆಡಳಿತ ನಡೆಸುತ್ತಿದ್ದಾರೆ. ಅವರ ನೇತೃತ್ವದ ಗ್ಯಾರಂಟಿ ಯೋಜನೆಗಳು ಈಗಾಗಲೇ ಎಲ್ಲ ಮನೆಗಳಿಗೆ ತಲುಪಿವೆ. ಈ ಯೋಜನೆಗಳ ಮಹತ್ವವನ್ನು ಕಾರ್ಯಕರ್ತರು ಪ್ರತಿ ಮನೆಗೂ ತೆರಳಿ ಜನರಿಗೆ ವಿವರಿಸುವ ಕೆಲಸ ಮಾಡಬೇಕು” ಎಂದು ಕರೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿ, “ಸಿದ್ದರಾಮಯ್ಯ ಎಲ್ಲಾ ಮುಖ್ಯಮಂತ್ರಿಗಳಿಗಿಂತ ಹೆಚ್ಚಿನ ಅವಧಿ ಯಶಸ್ವಿಯಾಗಿ ಸರ್ಕಾರ ನಡೆಸಿದ ನಾಯಕ. ಈಗಾಗಲೇ 16 ಬಜೆಟ್ ಮಂಡನೆ ಮಾಡಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಕರ್ನಾಟಕದ ಜನರ ಆಶೀರ್ವಾದ ಅವರೊಂದಿಗಿದೆ. ಉಚಿತ ಅಕ್ಕಿ ವಿತರಣೆ, ಶಕ್ತಿ ಯೋಜನೆ, ಯುವನಿಧಿ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಸೇರಿದಂತೆ ಐದು ಗ್ಯಾರಂಟಿಗಳ ಮೂಲಕ ಬಡವರ ಬದುಕನ್ನು ಹಸನಾಗಿಸಿದ್ದಾರೆ” ಎಂದು ಪ್ರಶಂಸಿಸಿದರು.
ಕಾಂಗ್ರೆಸ್ ಮುಖಂಡ ರಂಗನಾಥ ಮಾತನಾಡಿ ಸಿದ್ದರಾಮಯ್ಯ ಅವರ ಈ ಹೊಸ ದಾಖಲೆ ಕಾಂಗ್ರೆಸ್ ಪಾಳಯದಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ನಾಯಕರು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.