ಮಂಜುನಾಥ್ ಶೆಟ್ಟಿ…
ಶಿವಮೊಗ್ಗ : ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿತು.
ಲೋಕಾಯುಕ್ತ ಎಸ್.ಪಿ. ಎಂ.ಎಸ್. ಕೌಲಾಪುರೆ ಅವರ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಸಿಬ್ಬಂದಿಯ ತಂಡ ಈ ಕಾರ್ಯಾಚರಣೆಯಲ್ಲಿ ತೊಡಗಿದೆ.
ಪಾಲಿಕೆಯ ಕಂದಾಯ ವಿಭಾಗ, ಆಡಳಿತ ವಿಭಾಗ, ನ್ಯಾಯಾಂಗ ಶಾಖೆ, ಟಪಾಲು ಸೆಕ್ಷನ್, ಸಹಾಯವಾಣಿ ಕೇಂದ್ರ ಹಾಗೂ ನಲ್ಮ್ ವಿಭಾಗ ಸೇರಿದಂತೆ ಪ್ರತಿಯೊಂದು ಕಚೇರಿಯ ಮೇಲೆ ಲೋಕಾಯುಕ್ತರು ನಿಗಾ ವಹಿಸಿದ್ದಾರೆ.
ಡಿವೈಎಸ್‌ಪಿ ಹಾಗೂ ಮೂವರು ಇನ್ಸ್‌ಪೆಕ್ಟರ್‌ಗಳನ್ನು ಒಳಗೊಂಡ ಪ್ರತ್ಯೇಕ ತಂಡಗಳು ಕಡತಗಳ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ತಪಾಸಣೆ ನಡೆಸುತ್ತಿವೆ.
ಲೋಕಾಯುಕ್ತ ಅಧಿಕಾರಿಗಳ ಅನಿರೀಕ್ಷಿತ ಭೇಟಿಯಿಂದ ಪಾಲಿಕೆ ಸಿಬ್ಬಂದಿ ತಬ್ಬಿಬ್ಬಾದರು. ಬಾಕಿ ಇರುವ ಕಡತಗಳೆಷ್ಟು? ಕೆಲಸಗಳು ಏಕೆ ವಿಳಂಬವಾಗುತ್ತಿವೆ? ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲಾಗದೆ ಸಿಬ್ಬಂದಿ ತಡಬಡಾಯಿಸಿದರು. ಬೆಳಗ್ಗೆ 11 ಗಂಟೆಯಾದರೂ ಕೆಲವು ಕಚೇರಿಗಳ ಬೀಗ ತೆಗೆಯದಿರುವುದನ್ನು ಕಂಡು ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.