ಕರಕುಶಲ ವಸ್ತುಗಳು ಹಾಗೂ ಗೃಹ ಕೈಗಾರಿಕೆ ವಸ್ತುಗಳಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಮಹಿಳೆಯರು ತಯಾರಿಸುವ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಜತೆಯಲ್ಲಿ ಸೂಕ್ತ ಪ್ರೋತ್ಸಾಹ ಅವಶ್ಯಕ ಎಂದು ಮಹಿಳಾ ಉದ್ಯಮಿ ಭಾಗ್ಯ ಸತೀಶ್ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಮಹಿಳೆಯರು, ಸಾರ್ವಜನಿಕರಿಗೆ ಸ್ವಯಂ ಉದ್ಯೋಗ ಕೆಲಸದ ದೃಷ್ಠಿಯಿಂದ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಅತಿಥಿಯಾಗಿ ಮಾತನಾಡಿದರು.
ಮಹಿಳೆಯರು ಬಿಡುವಿನ ವೇಳೆಯಲ್ಲಿ ಸ್ವಯಂ ಉದ್ಯೋಗ ಕಲಿತು ತುಂಬಾ ಅಗತ್ಯವಾದ ಅಲಂಕಾರಿಕ ವಸ್ತುಗಳು, ಕರಕುಶಲ ವಸ್ತುಗಳು ಹಾಗೂ ಗೃಹ ಕೈಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಅಗತ್ಯ ಮಾರ್ಗದರ್ಶನ ಪಡೆದುಕೊಂಡು ಉದ್ಯಮದಲ್ಲಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.
ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೇ, ಬಿಡುವಿನ ವೇಳೆಯಲ್ಲಿ ಕಲಿಕಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಇದರಿಂದ ಮನಸ್ಸಿನ ಮೇಲಿನ ಒತ್ತಡ ಕಡಿಮೆ ಆಗುತ್ತಿದೆ. ಆಸಕ್ತಿಕರ ವಿಷಯಗಳಲ್ಲಿ ತೊಡಗಿಸಿಕೊಂಡು ಉದ್ಯಮವಾಗಿ ಪರಿವರ್ತಿಸಿಕೊಳ್ಳುವ ಬಗ್ಗೆಯು ಆಲೋಚನೆ ನಡೆಸಬೇಕು. ಮನೆಗಳಲ್ಲಿ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಿ ಮನೆಯನ್ನು ಸುಂದರವಾಗಿಟ್ಟುಕೊಳ್ಳಬೇಕು ಎಂದರು.
ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಜಯಂತಿ ವಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಸಕ್ರಿಯ ಆಗಿರುವಂತೆ ಸ್ವಯಂ ಉದ್ಯೋಗ ಹಾಗೂ ಕ್ರೀಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಆರ್ಥಿಕ ಪರಿಸ್ಥಿತಿ ನಿಭಾಯಿಸುವಲ್ಲಿಯು ಸಹಕಾರಿಯಾಗುತ್ತದೆ. ಹೊಸ ಹೊಸ ಕಲಿಕೆಗಳ ಬಗ್ಗೆಯೂ ತಿಳವಳಿಕೆ ಮೂಡುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನೂರಾರು ಕರಕುಶಲ ವಸ್ತುಗಳು, ಅಲಂಕಾರಿಕ ವಸ್ತುಗಳು ಹಾಗೂ ಗೃಹ ಕೈಗಾರಿಕಾ ವಸ್ತುಗಳ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿಂದು ವಿಜಯ್‌ಕುಮಾರ್, ಶಬರಿ ಕಡಿದಾಳ್, ವೀಣಾ ಪ್ರತಾಪ್, ಉಮಾ ವೆಂಕಟೇಶ್, ವಾಣಿ ಪ್ರವೀಣ್, ಲತಾ ಶಂಕರ್, ಸೀತಾಲಕ್ಷಿ ಮಮತಾ ಸುಧೀಂದ್ರ, ಮಧುರಾ ಮಹೇಶ್, ವೀಣಾ ಸುರೇಶ್, ವಿಜಯಾ ರಾಯ್ಕರ್, ಅನಿತಾ ಹಾಗೂ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ