ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯ ಸಚಿವರಾದ ಎ. ನಾರಾಯಣಸ್ವಾಮಿಯವರು ಸದಾಶಿವ ಆಯೋಗ ವರದಿಯ ಸಾಧಕ ಬಾಧಕಗಳ ಕುರಿತಾಗಿ ಬಹಿರಂಗ ಚರ್ಚೆಗೆ ಬರಬೇಕು ಎಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ಡಿ. ಆರ್. ಅವರು ಸವಾಲ್ ಎಸಗಿದ್ದಾರೆ.

ಇತ್ತೀಚಿಗೆ ಜನಾಶೀರ್ವಾದ ಯಾತ್ರೆಯ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಅವರು ಸದಾಶಿವ ಆಯೋಗ ವರದಿಯನ್ನು ಎಲ್ಲರ ಹೃದಯ ಗೆದ್ದು ಜಾರಿಗೆ ತರುತ್ತೇನೆ ಎಂಬ ವಿವೇಚನಾರಹಿತ ಹೇಳಿಕೆಯನ್ನು ನೀಡಿದ್ದು ಅದನ್ನು ಪರಿಶಿಷ್ಟ ಸಮುದಾಯದ 99 ಜಾತಿಗಳು ಉಗ್ರವಾಗಿ ಖಂಡಿಸುತ್ತದೆ.
ಒಳಮೀಸಲಾತಿ ಜಾರಿ ವಿಚಾರವಾಗಿ ಲಂಬಾಣಿ, ಬೋವಿ ಸಮುದಾಯದ ಶಾಸಕರು ಹಾಗೂ ಮಠಾಧೀಶರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಸುಳ್ಳು ಹೇಳಿಕೆಯನ್ನು ನೀಡಿರುವುದು ಅವರ ಘನತೆಗೆ ಶೋಭೆ ತರುವಂತದ್ದಲ್ಲ. ಈ ವಿಚಾರವಾಗಿ ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಲಂಬಾಣಿ,ಬೋವಿ, ಕೊರಚ,ಕೊರಮ ಸೇರಿದಂತೆ ಇತರೆ ಪರಿಶಿಷ್ಟ ಜಾತಿಗಳು ಕನಿಷ್ಠ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಬಡತನ,ಅನಕ್ಷರತೆ, ನಿರುದ್ಯೋಗ,ವಲಸೆ ಸಮಸ್ಯೆ ಎಲ್ಲೆಡೆ ತಾಂಡವವಾಡುತ್ತಿದೆ. ವಾಸಿಸಲು ಸ್ವಂತ ಜಾಗವಿಲ್ಲದೆ ಕೃಷಿ ಚಟುವಟಿಕೆಗಳಿಗಾಗಿ ಕೃಷಿಭೂಮಿ ಇಲ್ಲದೆ ಅತಂತ್ರರಾಗಿದ್ದಾರೆ. ಇಂತಹ ಜ್ವಲಂತ ಸಮಸ್ಯೆಗಳ ಬಗೆಗೆ ಅರಿವಿದ್ದರೂ ಕೂಡ
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಎ. ನಾರಾಯಣಸ್ವಾಮಿ ಅವರು ಅಭಿವೃದ್ಧಿಯ ಬಗೆಗೆ ಮಾತನಾಡುವುದನ್ನು ಬಿಟ್ಟು ಕೇವಲ ತಮ್ಮ ಸಮುದಾಯನ್ನು ಓಲೈಸುವ ಸಲುವಾಗಿ ಒಳಮೀಸಲಾತಿ ವಿಚಾರವಾಗಿ ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿರುವುದು ಸಚಿವರ ವರ್ಚಸ್ಸಿಗೆ ತದ್ವಿರುದ್ಧವಾಗಿದೆ ಎಂದರು.

ದಲಿತ ಕೋಟಾದಡಿಯಲ್ಲಿ ಕೇಂದ್ರ ಸಚಿವರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಎ.ನಾರಾಯಣಸ್ವಾಮಿಯವರ ಬಗೆಗೆ ನಮಗೆ ಅಪಾರವಾದ ಗೌರವವಿದೆ. ಅವರ ಅಧಿಕಾರದ ಅವಧಿಯಲ್ಲಿ ಪರಿಶಿಷ್ಟ ಸಮುದಾಯಗಳ ಸಮಗ್ರ ಅಭಿವೃದ್ಧಿಯ ಕನಸನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಆದ್ದರಿಂದ ಮಾನ್ಯ ಸಚಿವರು ಮೀಸಲಾತಿ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡದೆ ರಾಜ್ಯದ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮುಂದಾಗಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಬಹಿರಂಗಗೊಳಿಸಬೇಕು. ಸಾರ್ವಜನಿಕ ಚರ್ಚೆಗೆ ಒಳಪಡಿಸಿ, ಕಾನೂನು ತಜ್ಞರ ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು. ಅದನ್ನು ಬಿಟ್ಟು ಯಾವುದೋ ರಾಜಕೀಯ ಒತ್ತಡದಿಂದ ಕೇಂದ್ರಕ್ಕೆ ಶಿಫಾರಸು ಮಾಡಲು ಹೊರಟರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಭೋವಿ ಗುರುಪೀಠದ ಜಗದ್ಗುರುಗಳಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ರಾಜ್ಯದ 99 ಪರಿಶಿಷ್ಟ ಸಮುದಾಯಗಳು ಉಗ್ರ ಹೋರಾಟವನ್ನು ರೂಪಿಸುವುದು ಅನಿವಾರ್ಯವಾಗಲಿದೆ.

ಸೋರಿಕೆಯಾಗಿರುವ ಸದಾಶಿವ ಆಯೋಗದ ವರದಿಯಲ್ಲಿ ಸ್ಪೃಶ್ಯರು ಹಾಗೂ ಅಸ್ಪೃಶ್ಯರು ಎಂಬ ಅಸಂವಿಧಾನಿಕ ಪದ ಬಳಕೆ ಮಾಡಿರುವುದು ಖಂಡನೀಯ.
ಈ ದೇಶದ ಸಂವಿಧಾನದಲ್ಲಿ ಸ್ಪೃಶ್ಯರು ಹಾಗೂ ಅಸ್ಪೃಶ್ಯರು ಎಂಬ ಮಾನದಂಡದ ಆಧಾರದ ಮೇಲೆ ಮೀಸಲಾತಿಯನ್ನು ನೀಡಲು ಅವಕಾಶವಿಲ್ಲ. ಸದಾಶಿವ ಆಯೋಗದ ವರದಿಯು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ, ಸಾಂವಿಧಾನಿಕ ನಿಲುವುಗಳಿಗೆ ವಿರುದ್ಧವಾಗಿದೆ.
ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಯಾನಾಯ್ಕ್,ಮಂಜುನಾಯ್ಕ್,ಸಂತೋಷ್ ನಾಯ್ಕ್,ಕಲ್ಲೇಶ್ ನಾಯ್ಕ್,ಸುನೀಲ್ ನಾಯ್ಕ್ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ