ದೇವಸ್ಥಾನವನ್ನು ಧ್ವಂಸ ಮಾಡಿಸುವ ಮೂಲಕ ಬಿಜೆಪಿ ಭಾವನೆಗಳ ಕೆರಳಿಸಿ ನಕಲಿ ಹಿಂದುತ್ವ ಪ್ರದರ್ಶಿಸಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಆರ್. ಕಿರಣ್ ಆರೋಪಿಸಿದ್ದಾರೆ.
ಧಾರ್ಮಿಕ ಕಟ್ಟಡಗಳನ್ನು ಸ್ಥಳೀಯರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಒಡೆದು ಹಾಕುವುದು ಅವಿವೇಕದ ನಿರ್ಧಾರವಾಗಿದೆ. ಇದು ಅಧಿಕಾರಿಗಳ ಕೆಲಸ. ತನಗೇನೂ ಗೊತ್ತಿಲ್ಲ ಎಂದು ರಾಜ್ಯ ಸರ್ಕಾರ ಜಾಣಕುರುಡುತನವನ್ನು ಪ್ರದರ್ಶಿಸುತ್ತಿದೆ. ಅಕಸ್ಮಾತ್ ದೇವಾಲಯ ಕೆಡವಿದ್ದು ಶ್ರೀರಾಮ ಮಂದಿರವಾಗಿದ್ದರೆ ಇದೇ ಬಿಜೆಪಿಯವರು ಹೇಗೆ ಸಹಿಸಿಕೊಳ್ಳುತ್ತಿದ್ದರು ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಮತೀಯ ಭಾವನೆಗಳ ಕೆರಳಿಸಿ ಹೇಳಿಕೆ ನೀಡುತ್ತಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹನಿಗೆ ಬಿಜೆಪಿ ನಾಯಕರು ಬಾಯಿಗೆ ಬೀಗ ಹಾಕುವಂತೆ ಸೂಚನೆ ನೀಡಬೇಕಾಗಿದೆ. ರಾಜಕಾರಣಕ್ಕಾಗಿ ಮೇಲ್ನೋಟಕ್ಕೆ ವಿರೋಧ ವ್ಯಕ್ತಪಡಿಸಿದಂತೆ ಮಾತನಾಡಿ ತಮ್ಮ ದಡ್ಡತನವನ್ನು ಪ್ರದರ್ಶಿಸುತ್ತಿದ್ದಾರೆ. ಕೆ.ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿಯ ಕೆಲ ನಾಯಕರು ಎಲ್ಲಿ ತಮ್ಮ ಮತಬ್ಯಾಂಕ್ ಕಡಿಮೆಯಾಗುತ್ತದೋ ಎಂಬ ಭಯದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಷ್ಟೇ ಎಂದು ಕಿರಣ್ ವ್ಯಂಗ್ಯವಾಡಿದ್ದಾರೆ.
ಒಂದು ಹನಮ ದೇವಸ್ಥಾನವನ್ನು ಕೆಡವಿದಂತೆ ಮಾಡಿ ನಂತರ ಇದೇ ಆಧಾರದಲ್ಲಿ ಚರ್ಚ್, ಮಸೀದಿಗಳ ಧ್ವಂಸ ಮಾಡುವ ಕೆಟ್ಟ ಆಲೋಚನೆಯೂ ಬಿಜೆಪಿ ಸರ್ಕಾರಕ್ಕೆ ಇದ್ದಂತೆ ಕಾಣುತ್ತದೆ. ನಾನು ಹಾಗಲ್ಲ ಎಂದು ಬಿಜೆಪಿ ಹೇಳುವುದಾದರೆ ಈ ತಕ್ಷಣವೇ ಎಲ್ಲ ಧಾರ್ಮಿಕ ಕಟ್ಟಡಗಳ ಸಮೀಕ್ಷೆ ಮಾಡದೇ ಆತುರ ಆತುರವಾಗಿ ಕೆಡವುವುದನ್ನು ನಿಲ್ಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾಗಿದೆ. ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ. ಮಳೆಯಿಂದ ಹಾಳಾದ ರಸ್ತೆಗಳು ನಿರ್ಮಾಣವಾಗಿಲ್ಲ. ಹೀಗೆ ಮಾಡುವುದಕ್ಕೆ ಬೇಕಾದಷ್ಟು ಕೆಲಸಗಳಿರುವಾಗ, ಸಲ್ಲದ ಕೆಲಸಕ್ಕೆ ಅಧಿಕಾರಿಗಳು ಕೈಹಾಕಿರುವುದು ಅತ್ಯಂತ ಖಂಡನೀಯ ಮತ್ತು ಸರ್ಕಾರ ಅದನ್ನು ಸಮರ್ಥಿಸಿಕೊಳ್ಳುವ ರೀತಿಯಂತೂ ಅಸಹ್ಯವಾಗಿದೆ ಮತ್ತು ಸೋಗಲಾಡಿತನಕ್ಕೆ ಸಾಕ್ಷಿಯಾಗಿದೆ.ಕೆಡವಿರುವ ದೇವಸ್ಥಾನ ವನ್ನು ಮರು ನಿರ್ಮಾಣ ಮಾಡ ಬೇಕು ಇಲ್ಲದಿದ್ದರೆ ಯುವ ಕಾಂಗ್ರೆಸ್ ರಾಜ್ಯ ಪ್ರತಿಭಟನೆ ಮಾಡ ಬೇಕಾಗುತ್ತದೆ ಎಂದು ಕಿರಣ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153