ಜೂನ್ ಅಂತ್ಯದವರೆಗೂ ಕೋವಿಡ್-19 ಮಾರ್ಗಸೂಚಿಗಳನ್ನು ಮುಂದುವರೆಸಬೇಕು ಎಂದು ಕೇಂದ್ರ ಗೃಹ ಸಚಿವಾಲಯದಿಂದ ಬಂದಿರುವ ಆದೇಶದ ಪಾಲನೆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ.
ಸಂಜೆ 6 ಗಂಟೆಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಕೋವಿಡ್ ಉಸ್ತುವಾರಿ ಸಚಿವರು ಹಾಗು ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ. ಡಿಸಿಎಂ ಅಶ್ವತ್ಥ ನಾರಾಯಣ, ಸಚಿವರಾದ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಆರ್.ಅಶೋಕ್, ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ದೇಶದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಜೂನ್ ಅಂತ್ಯದವರೆಗೂ ಕೋವಿಡ್-19 ಮಾರ್ಗಸೂಚಿ ಮುಂದುವರೆಸುವಂತೆ ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.ಈ ಹಿನ್ನಲೆಯಲ್ಲಿ ಇಂದಿನ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ.ಸದ್ಯ ಲಾಕ್ಡೌನ್ 3.ಓ ಜಾರಿಯಲ್ಲಿದ್ದು ಜೂನ್ 7 ರವರೆಗೂ ಇದೇ ನಿಯಮ ಅನ್ವಯವಾಗಲಿದೆ.
ನಂತರ ಮತ್ತೆ ಲಾಕ್ಡೌನ್ ವಿಸ್ತರಣೆ ಮಾಡಬೇಕಾ ಅಥವಾ ಜೂನ್ ಅಂತ್ಯದವರೆಗೂ ಯಾವ ರೀತಿಯ ಕಠಿಣ ನಿಯಮ, ಮಾರ್ಗಸೂಚಿ ಅಗತ್ಯ ಎನ್ನುವ ಕುರಿತು ಚರ್ಚೆ ನಡೆಸಲಾಗುತ್ತದೆ. ಜಿಲ್ಲೆಗಳಲ್ಲಿ ಲೋಕಲ್ ಕಂಟೈನ್ಮೆಂಟ್ ಝೋನ್ ಸ್ಥಾಪಿಸಬೇಕು ಎಂದೂ ಕೇಂದ್ರ ಸೂಚನೆ ನೀಡಿರುವ ಕುರಿತು ಚರ್ಚೆ ನಡೆಸಲಾಗುತ್ತದೆ.
ಲಾಕ್ಡೌನ್ ನಂತರ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ ಸಕ್ರಿಯ ಕೇಸ್ ಕಡಿಮೆಯಾಗದ ಕಾರಣ ಮಾರ್ಗಸೂಚಿ ಮುಂದುವರೆಸಬೇಕು ಎನ್ನುವ ಸೂಚನೆ ಬಂದಿರುವ ಕುರಿತು ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಇದರ ಜೊತೆ ಬೆಡ್, ಆಕ್ಸಿಜನ್ ಸಮಸ್ಯೆ, ಔಷಧಿ ಪೂರೈಕೆ, ಐಸಿಯು, ವೆಂಟಿಲೇಟರ್ ಬೇಡಿಕೆ, ಬಳಕೆ, ಲಾಕ್ಡೌನ್ ನಂತರದ ಸ್ಥಿತಿಗತಿ ಕುರಿತು ಸಭೆಯಲ್ಲಿ ಸಿಎಂ ಸಮಗ್ರವಾದ ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ…
ವರದಿ ಮಹೇಶ್ ಗೌಡ ಬೆಂಗಳೂರು…