ಶಿವಮೊಗ್ಗ ನ್ಯೂಸ್…

ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ದೀಪಾವಳಿಯ ಸಂಭ್ರಮ ಜಿಲ್ಲೆಯೆಲ್ಲೆಡೆ ಕಂಡು ಬರುತ್ತಿದೆ. ಕಳೆದ ಬಾರಿ ಕೊರೋನಾದ ಹಿನ್ನಲೆಯಲ್ಲಿ ಹಬ್ಬವನ್ನು ಸಡಗರದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ.

ಈ ವರ್ಷ ಹಬ್ಬದ ಸಿದ್ಧತೆ ಈಗಾಗಲೇ ನಡೆದಿದೆ.ಸಾಮಾನ್ಯವಾಗಿ ದೀಪಾವಳಿ ಮೊದಲು ಐದು ದಿನ ನಡೆಯುತ್ತಿತ್ತು. ನಂತರ ಮೂರು ದಿನಕ್ಕೆ ಸೀಮಿತವಾಗಿದ್ದು, ಈ ಬಾರಿ ನಾಳೆ ಬುಧವಾರ ನರಕ ಚತುರ್ದಶಿಯಾಗಿದ್ದು, ಗುರುವಾರ ಅಮಾವಾಸ್ಯೆಯಾಗಿದ್ದು, ಧನಲಕ್ಷ್ಮಿ ಪೂಜೆ ನೆರವೇರಿಸಲಾಗುವುದು. ಹಾಗೆಯೇ ಶುಕ್ರವಾರ ಬಲಿಪಾಡ್ಯಮಿ ಇರುತ್ತದೆ. ಈ ಮೂರು ದಿನಗಳ ಹಬ್ಬಕ್ಕೂ ಜನ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಈ ಬಾರಿ ಜನ ಬಟ್ಟೆ, ಯಂತ್ರೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.

ಗಾಂಧಿ ಬಜಾರ್ ಸೇರಿದಂತೆ ಸೇರಿದಂತೆ ಬಹುತೇಕ ಬಟ್ಟೆ ಅಂಗಡಿಗಳಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದಾರೆ. ಈ ಬಾರಿಯೂ ಕೂಡ ಜಿಲ್ಲಾಡಳಿತ ಪಟಾಕಿಗಳ ಮಾರಾಟಕ್ಕೆ ಸೈನ್ಸ್ ಮೈದಾನ ಹಾಗೂ ನೆಹರೂ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಿದೆ. ಇದಲ್ಲದೇ ಸಣ್ಣಪುಟ್ಟ ಅಂಗಡಿಗಳಲ್ಲೂ ಕೂಡ ಪಟಾಕಿಗಳ ಮಾರಾಟ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಹಸಿರು ಪಟಾಕಿಗೆ ಹೆಚ್ಚು ಒತ್ತು ನೀಡಿದ್ದು, ಪರಿಸರ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಸಾಮಾನ್ಯ ಪಟಾಕಿಗಿಂತ ಹಸಿರು ಪಟಾಕಿ ದರ ದುಬಾರಿಯಾಗಿದ್ದು, ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ನುಂಗಲಾರದ ತುತ್ತಾಗಿದೆ.

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ಹಿನ್ನಲೆಯಲ್ಲಿ ಸೂತಕದ ವಾತಾವರಣ ಇದ್ದು ಅನೇಕರು ಹಬ್ಬ ಮಾಡಲು ಇಷ್ಟಪಡುತ್ತಿಲ್ಲ. ಪುನೀತ್ ನಂತಹ ನಟನೇ ಹಬ್ಬದ ಹೊತ್ತಲ್ಲಿ ಇಲ್ಲವೆಂದ ಮೇಲೆ ಹೇಗೆ ಹಬ್ಬ ಆಚರಿಸುವುದು. ಬೆಳಕೇ ನಂದಿ ಹೋದದಂತಾಗಿದೆ ಎಂದು ಹಲವರು ಹಬ್ಬದ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಈ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿದೆ. ತರಕಾರಿ, ಹೂವು, ಹಣ್ಣುಗಳ ಬೆಲೆಯಂತೂ ಗಗನಕ್ಕೇರಿದೆ. ಒಂದು ಕೆಜಿ ಟೊಮೆಟೋ 50 ರೂ. ಇದ್ದು, ಸೊಪ್ಪು ಸೇರಿದಂತೆ ಎಲ್ಲಾ ತರಕಾರಿ ದರಗಳು 50 ರೂ. ಇದೆ. ಜನರ ಹಬ್ಬ ಮಾಡುವುದು ಕೂಡ ಕಷ್ಟವಾಗುತ್ತಿದೆ. ಈ ನಡುವೆ ಅಡುಗೆ ಅನಿಲ, ಪೆಟ್ರೋಲ್, ಡೀಸಲ್ ಬೆಲೆ ಕೂಡ ಏರಿಕೆಯಾಗಿರುವುದು ಜನರಿಗೆ ಹೊರೆಯಾಗಿ ಪರಿಣಮಿಸಿದೆ.

ಇದ್ಯಾವುದರ ಗಮನವಿಲ್ಲದಂತೆ ಹಳ್ಳಿಗಳಲ್ಲಿ ಮಾತ್ರ ಹಬ್ಬದ ಸಡಗರ ಹೆಚ್ಚಿದೆ. ನೀರು ತುಂಬುವುದು, ಕೆರಕನ್ನು ಇಡುವುದು, ಗೋ ಪೂಜೆ, ಎತ್ತುಗಳ ಮೆರವಣಿಗೆ, ರೈತರು ತಮ್ಮ ಬೇಸಾಯದ ಎಲ್ಲಾ ಉಪಕರಣಗಳನ್ನು ತೊಳೆದು ವಿಶೇಷವಾಗಿ ಪೂಜೆ ಮಾಡಲು ಸಿದ್ಧರಾಗಿದ್ದಾರೆ. ಅನೇಕ ಕಡೆದ ದನ ಬೆದರಿಸುವ ಸಂಪ್ರದಾಯವೂ ಈ ಹಬ್ಬದಲ್ಲಿದೆ. ಹಾಗಾಗಿ ಗ್ರಾಮೀಣ ಜನರ ಪಾಲಿಗೆ ಈ ಬಾರಿ ದೀಪಾವಳಿ ಅತ್ಯಂತ ಸಂಭ್ರಮ ತರುವುದಂತೂ ನಿಜ. 

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…