ಶಿವಮೊಗ್ಗ ನ್ಯೂಸ್…

ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ, ಸೌಹಾರ್ದತೆ ಅವಶ್ಯಕ ಎಂದು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಹೇಳಿದರು.

ಸಹ್ಯಾದ್ರಿ ಕಾಲೇಜಿನಲ್ಲಿ ಎನ್.ಎಸ್.ಎಸ್. ಶಿಬಿರವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ, ಪರಿಸರದ ಮಹತ್ವ, ಸೌಹಾರ್ದತೆ, ಯುವ ಸಮೂಹಕ್ಕೆ ಅವಶ್ಯಕತೆ ಇದೆ. ಇಂತಹ ಶಿಬಿರಗಳು ಈ ನಿಟ್ಟಿನಲ್ಲಿ ವಿಶೇಷ ವೇದಿಕೆಯಾಗಿದೆ. ಶಿಬಿರವನ್ನು ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಉಪಯೋಗಿಸಿಕೊಳ್ಳಬೇಕು.ಶಿಬಿರವು ಯಶಸ್ವಿಯಾಗಲಿ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಎನ್. ಎಸ್. ಎಸ್. ಶಿಬಿರಗಳು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಸಾಮಾಜಿಕ ಮೌಲ್ಯಗಳನ್ನು ಕಲಿಸುವ ತರಬೇತಿ ಕೇಂದ್ರಗಳಾಗಿವೆ. ಉಳಿ ಪೆಟ್ಟು ತಿಂದ ಕಲ್ಲೇ ಮೂರ್ತಿಯಾಗುವುದು.  ಇಂತಹ ಶಿಬಿರಗಳು ಮೂರ್ತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತವೆ ಎಂದರು.

ಕುವೆಂಪು ವಿಶ್ವವಿದ್ಯಾಲಯ ಎನ್. ಎಸ್. ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಪರಿಸರ ನಾಗರಾಜ್, ಮಾತನಾಡಿ, ಶಿಬಿರದ ರೂಪುರೇಷೆಗಳನ್ನು ವಿವರಿಸಿ, ವ್ಯಕ್ತಿತ್ವ ವಿಕಸನ, ಸ್ವಚ್ಛತಾ ಮನೋಭಾವ, ನಾಯಕತ್ವ ತರಬೇತಿಯನ್ನು ಮೂಲಭೂತ ಉದ್ದೇಶವನ್ನಾಗಿಟ್ಟುಕೊಂಡು ರಾಜ್ಯದ ಪ್ರಥಮ ಶಿಬಿರವನ್ನು ಇಲ್ಲಿ ಹಮ್ಮಿಕೊಂಡಿದ್ದೇವೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪದವಿ ಕಾಲೇಜುಗಳ ಆಯ್ದ 150 ಸ್ವಯ ಸೇವಕರು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.

ಸಹ್ಯಾದ್ರಿ ಸೈನ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಎಂ. ವಾಗ್ದೇವಿ ಮಾತನಾಡಿ, ಉತ್ತಮ ಆಲೋಚನೆ ಮತ್ತು ಉತ್ತಮ ಯೋಜನೆಗಳೊಂದಿಗೆ ಸಮಾಜದ ಅಭಿವೃದ್ಧಿಗೆ ಇಂತಹ ಶಿಬಿರವು ಮಹತ್ವದ ಪಾತ್ರ ವಹಿಸುತ್ತದೆ ಎಂದರು.ಸಹ್ಯಾದ್ರಿ ಕಲಾ ಕಾಲೇಜಿನ ಡಾ. ಅವಿನಾಶ್ ಟಿ. ಮಾತನಾಡಿ, ಕರ್ನಾಟಕದ ಸಂಸ್ಕೃತಿ, ಕಲೆ,ಸಂಗೀತ,ರಾಜಕೀಯ, ಇತಿಹಾಸದಲ್ಲೇ ಅತ್ಯಂತ ಮುಂಚೂಣಿಯಲ್ಲಿರುವಂತಹ ಪರಂಪರೆಯನ್ನು ಸಹ್ಯಾದ್ರಿ ಕಾಲೇಜು ಹೊಂದಿದೆ. ಅಂತಹ ಪರಂಪರೆಯನ್ನು ಮುಂದುವರೆಸಲು ಇಂತಹ ಶಿಬಿರಗಳು ಮೂಲ ವೇದಿಕೆಯಾಗಲಿ ಎಂದರು.

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲರಾದ ಡಾ. ವೀಣಾ ಎಂ.ಕೆ., ಮಾತನಾಡಿ, ಬದುಕಿನಲ್ಲಿ ಸರಳತೆ, ಸಹೃದಯತೆ, ಸಂಸ್ಕಾರಗಳು ಅತ್ಯಂತ ಅವಶ್ಯಕ. ಕೀಳರಿಮೆ ತೊರೆದು ಕ್ರಿಯಾಶೀಲರಾಗಿ ಶಿಬಿರದಲ್ಲಿ ಭಾಗವಹಿಸಿ ಎಂದರು. ಪ್ರಮುಖರಾದ ಕಾರ್ಯಕ್ರಮಾಧಿಕಾರಿ ಪರಶುರಾಂ, ಗಣೇಶ್ ಕೆಂಚನಾಲ್ ಉಪಸ್ಥಿತರಿದ್ದರು.ಡಾ. ಶುಭ ಮರವಂತೆ ಸ್ವಾಗತಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಪ್ರಕಾಶ್ ಮರ್ಗನಳ್ಳಿ ವಂದಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಹಾಲಮ್ಮ ನಿರೂಪಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…