ಮಕ್ಕಳ ದಿನಾಚರಣೆ…

ನವೆಂಬರ್ 14 ಮಕ್ಕಳ ನೆಚ್ಚಿನ ದಿನ, ಏಕೆಂದರೆ ಪ್ರತಿವರ್ಷ ಈ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನಿಸಿದ ಈ ದಿನವನ್ನು ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮೀಸಲಿಡಲಾಗಿದೆ. ಅಂದರೆ, ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಪ್ರತಿವರ್ಷ ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ನೆಹರು ಅವರನ್ನು ಮಕ್ಕಳು ಪ್ರೀತಿಯಿಂದ ‘ಚಾಚಾ’ ಎಂದು ಕರೆಯುತ್ತಿದ್ದರು.

ಮಕ್ಕಳ ದಿನಾಚರಣೆಯ ಇತಿಹಾಸ…


‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂಬ ಮಾತಿದೆ. ಅದೇ ರೀತಿ ಮಕ್ಕಳನ್ನು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯವೆಂದು ಪರಿಗಣಿಸಲಾಗಿದೆ. ಭಾರತವು 1956 ರಿಂದ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದೆ. ಚಾಚಾ ನೆಹರೂ ಅವರ ಮರಣದ ನಂತರ, ಮಕ್ಕಳೊಂದಿಗಿನ ಅವರ ಬಾಂಧವ್ಯ ಮತ್ತು ಒಲವಿನಿಂದ, ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸುವ ಮತ್ತು ಅವರ ಹಕ್ಕುಗಳಿಗಾಗಿ ಪ್ರತಿಪಾದಿಸುವ ದಿನವೆಂದು ಗುರುತಿಸಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಮಕ್ಕಳ ದಿನದ ಮಹತ್ವ…


ಮಕ್ಕಳ ದಿನಾಚರಣೆಯ ಗೌರವದ ಹೊರತಾಗಿ, ಮಕ್ಕಳ ಹಕ್ಕುಗಳು, ಕಾಳಜಿ ಮತ್ತು ಶಿಕ್ಷಣದ ಬಗ್ಗೆ ಹೇಳುತ್ತದೆ. ಭಾರತದ ಮೊದಲ ಪ್ರಧಾನ ಮಂತ್ರಿ ಆಧುನಿಕ ಭಾರತ ಹೇಗಿರಬೇಕು ಎಂಬುದರ ಬಗ್ಗೆ ಸರಿಯಾದ ದೃಷ್ಟಿಯನ್ನು ಹೊಂದಿದ್ದರು. ಜೊತೆಗೆ ತಮ್ಮ ಕನಸುಗಳನ್ನು ಮಕ್ಕಳಿಂದ ನನಸಾಗಿಸಬೇಕು ಎಂದು ಬಯಸಿದವರು. ಹಾಗಂತ, ಮಕ್ಕಳ ದಿನಾಚರಣೆಯ ಸಂಭ್ರಮದ ನಡುವೆ ಚಾಚಾ ನೆಹರೂ ಅವರ ಸಂದೇಶವನ್ನು ನಾವು ಮರೆಯಬಾರದು. ಅದೇನೆಂದರೆ, ಮಕ್ಕಳಿಗೆ ಅವರ ಬೆಳವಣಿಗೆಗೆ ಸುರಕ್ಷಿತ ಮತ್ತು ಪ್ರೀತಿಯ ಪರಿಸರ ಇರಬೇಕು. ಅದಲ್ಲದೆ ಅವರಿಗೆ ಸಾಕಷ್ಟು ಮತ್ತು ಸಮಾನ ಅವಕಾಶಗಳನ್ನು ಪೂರೈಸಿ ಅವರಿಂದ ದೇಶದ ಪ್ರಗತಿಗೆ ಕೊಡುಗೆ ಪಡೆಯಬಹುದು. ಈ ದಿನವು ನಮ್ಮಲ್ಲಿನ ಪ್ರತಿಯೊಬ್ಬರಿಗೂ ಮಕ್ಕಳ ಕಲ್ಯಾಣದ ಬಗೆಗಿನ ನಮ್ಮ ಬದ್ಧತೆಯನ್ನು ಪುನರ್ ನವೀಕರಿಸಲು ನೆನಪು ಮಾಡಿ, ಮಕ್ಕಳಿಗೆ ನೆಹರುವಿನ ಆದರ್ಶದಂತೆ ಮತ್ತು ಅವರ ಮಾದರಿಯಲ್ಲಿ ಬದುಕಲು ಕಲಿಸಬೇಕು.

ಮಕ್ಕಳ ಮೆಚ್ಚಿನ ‘ಚಾಚಾ ನೆಹರು’…


ಪಂಡಿತ್ ಜವಾಹರಲಾಲ್ ನೆಹರು ಮಕ್ಕಳ ಶಿಕ್ಷಣವನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದರು. ಸ್ವತಂತ್ರ ಭಾರತವು ತನ್ನ ಮಕ್ಕಳ ಏಳಿಗೆಯೊಂದಿಗೆ ಮಾತ್ರ ಸಮೃದ್ಧಿಯಾಗಬಲ್ಲದು ಎಂದು ನಂಬಿದ್ದರು. ಮಕ್ಕಳು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂಬ ದೃಢವಾದ ನಂಬಿಕೆಯನ್ನು ಹೊಂದಿದ್ದರು. “ಇಂದಿನ ಮಕ್ಕಳು ನಾಳಿನ ಭಾರತವನ್ನು ಕಟ್ಟುತ್ತಾರೆ. ನಾವು ಅವರನ್ನು ಬೆಳೆಸುವ ವಿಧಾನವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ” ಎಂದು ಚಾಚಾ ನೆಹರು ಹೇಳುತ್ತಿದ್ದರು.ನೆಹರು ರವರಿಗೆ ಮಕ್ಕಳನ್ನು ಕಂಡರೆ ಅತಿ ಪ್ರೀತಿ ತೋರುವಂತೆ.ಅವರಿಗೆ ಗುಲಾಬಿ ಹೂ ಎಂದರೆ ಬಹಳ ಇಷ್ಟ.ಅವರು ಪ್ರತಿದಿನ ಸದಾ ತಮ್ಮ ಕೋಟಿನ ಜೇಬಿನಲ್ಲಿ ಗುಲಾಬಿ ಹೂ ಧರಿಸುತ್ತಿದ್ದರು.

ನಾವು ಮಕ್ಕಳೊಂದಿಗೆ ಮಕ್ಕಳಾಗಬೇಕು:ಮಕ್ಕಳು ದೇವರಂತೆ,ಅವರ ಮುಗ್ದತೆ, ನಗು, ಮಿತಿಯಿಲ್ಲದ ಪ್ರೀತಿ, ಸಕಾರಾತ್ಮಕ ಮನಸ್ಸು, ಇವೆಲ್ಲವನ್ನು ನೋಡಿದಾಗ ನಾವು ಮತ್ತೆ ಚಿಕ್ಕ ಮಕ್ಕಳಾಗಬೇಕು ಎಂದು ಅನಿಸದೆ ಇರದು.ಏಕೆಂದರೆ, ಆ ಮುಗ್ದತೆ, ವಯಸ್ಸು, ಮನಸ್ಸು, ಪ್ರೀತಿ, ಸಂತೋಷ ಎಲ್ಲವೂ ನಿಷ್ಕಲ್ಮಶವಾಗಿರುತ್ತದೆ.ನಾವು ನಮ್ಮ ಮಕ್ಕಳಿಗೆ ಹೆಚ್ಚಿನ ಸಮಯ ನೀಡಬೇಕು.ಹಲವು ಕಾರ್ಯ ಒತ್ತಡಗಳ ನಡುವೆಯೂ ನಾವು ಮಕ್ಕಳೊಂದಿಗಿದ್ದರೆ ಅವರ ಬಾಲ್ಯ ಇನ್ನಷ್ಟು ಸೊಗಸಾಗುತ್ತದೆ.ನಾವು ನಮ್ಮ ಮಕ್ಕಳು ಭವಿಷ್ಯದಲ್ಲಿ ಉನ್ನತ ವ್ಯಕ್ತಿಯಾಗುತ್ತಾರೆ.ದೊಡ್ಡ ಹುದ್ದೆಗೇರುತ್ತಾರೆ ಎಂದು ಕನಸು ಕಾಣುವುದಕ್ಕಿಂತ ಮಿಗಿಲಾಗಿ ಅವರಲ್ಲಿ ಮಾನವೀಯತೆಯನ್ನು ಬೆಳೆಸಬೇಕು.ಮೊದಲು ಮಾನವರಾಗಲು ಕಲಿಸಬೇಕು.

ನಾವು ನಮ್ಮ ಮಕ್ಕಳಿಗೆ ಅಥವಾ ನಮ್ಮ ಶಾಲಾ ಮಕ್ಕಳಿಗೆ ಮೊದಲು ಯೋಚಿಸುವುದನ್ನು ಕಲಿಸಬೇಕು.ಮತ್ತೆ ಹೇಗೆ ಯೋಚಿಸಬೇಕು. ಉತ್ತಮವಾದುದರ ಬಗ್ಗೆ,ಆಸಕ್ತಿದಾಯಕವಾದುದರ ಬಗ್ಗೆ ಉತ್ತಮವಾಗಿ ಯೋಚಿಸುವಂತೆ ಮಾಡಬೇಕು.ನಾವು ಸಹ ಮಕ್ಕಳಿಂದ ಅನೇಕ ವಿಷಯಗಳನ್ನು ಕಲಿಯುತ್ತೇವೆ.ಮಕ್ಕಳು ಯಾವುದೇ ಕಾರಣವಿಲ್ಲದೇ ಸಂತೋಷವಾಗಿರುತ್ತಾರೆ.ಯಾವಾಗಲೂ ಕಾರ್ಯನಿರತರಾಗಿರುತ್ತಾರೆ.ಈ ವಿಚಾರವನ್ನು ನಾವು ಮಕ್ಕಳಿಂದ ಕಲಿಯಬೇಕಿದೆ.
ಈ ದಿನ ಶಾಲೆಗಳಲ್ಲಿ ಮಕ್ಕಳು ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟು ಸಿಹಿ ತಿನಿಸುಗಳನ್ನು ಹಂಚಿಕೊಳ್ಳುವುದೇ ಸಂಭ್ರಮ.ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸಂಗೀತ, ನೃತ್ಯ,ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡುತ್ತಾರೆ. ಮಕ್ಕಳ ಮುಖದಲ್ಲಿ ಕಾಣುವ ಆ ಮುಗ್ಧ ನಗುವೆ ಚೆಂದ.ನಮ್ಮ ಶಾಲೆಗೆ ಬರುವ ಮಕ್ಕಳನ್ನು ನಮ್ಮ ಸ್ವಂತ ಮಕ್ಕಳಂತೆ ಕಾಣೋಣ.ನಾಳಿನ ಉತ್ತಮ ಪ್ರಜೆಗಳನ್ನು ರೂಪಿಸುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಬಹಳ ಹಿರಿದಿದೆ.ಆ ಜವಾಬ್ದಾರಿ ಯನ್ನು ಅರಿತು ಕಾರ್ಯಪ್ರವೃತ್ತರಾಗೋಣ.ಎಲ್ಲಾ ಮುದ್ದು ಮಕ್ಕಳಿಗೂ ಸಂಭ್ರಮದ ಮಕ್ಕಳ ದಿನಾಚರಣೆಯ ಶುಭಾಶಯಗಳು.

*ಶ್ರೀಮತಿ.ಅನಿತಕೃಷ್ಣ* *ಶಿಕ್ಷಕಿ.ತೀರ್ಥಹಳ್ಳಿ.