ಶಿವಮೊಗ್ಗ ನ್ಯೂಸ್…
ಶಿವಮೊಗ್ಗ: ನಗರದ ಕನಕ ನಗರ ಬಡಾವಣೆಯಲ್ಲಿ ಶ್ರೀ ಬೀರಲಿಂಗೇಶ್ವರ ದೇವಾಲಯ ಸಮಿತಿ ವತಿಯಿಂದ ನಿರ್ಮಾಣಗೊಂಡಿರುವ ನೂತನ ಶ್ರೀ ಬೀರಲಿಂಗೇಶ್ವರ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ಇಂದು ಅದ್ದೂರಿಯಿಂದ ನಡೆದು, ಧರ್ಮಸಭೆಯ ನಂತರ ಕಾರ್ಯಕ್ರಮ ಸಂಪನ್ನಗೊಂಡಿತು.
ಬೆಳಿಗ್ಗೆ 6.30ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಕಾಗಿನೆಲೆ ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ರುದ್ರಾಭಿಷೇಕ, 108 ಕಳಶ ಕುಂಭದೊಂದಿಗೆ ವಿಗ್ರಹ ಪ್ರತಿಷ್ಠಾಪನೆ, ಪೂರ್ಣಾಹುತಿ, ನೇತ್ರೋನ್ಮಿಲನ ಕದಳಿ ಫಲ ವೃಕ್ಷ ಛೇದನ, ಪುಷ್ಪಾಲಂಕಾರ ಮತ್ತು ಮಹಾಮಂಗಳಾರತಿಯೊಂದಿಗೆ ನೂತನ ದೇವಾಲಯದ ವಿಗ್ರಹಗಳ ಪ್ರತಿಷ್ಠಾಪನೆ ಮೂಲಕ ದೇವಾಲಯ ಲೋಕಾರ್ಪಣೆಗೊಂಡಿತು. ಧಾರ್ಮಿಕ ವಿಧಿವಿಧಾನಗಳನ್ನು ನವೀನ್ ಒಡೆಯರ್ ನೇತೃತ್ವದಲ್ಲಿ ನಡೆದವು.
ನಂತರ ಶ್ರೀಕ್ಷೇತ್ರ ಕಾಗಿನೆಲೆ ಹೊಸದುರ್ಗ ಶಾಖಾಮಠದ ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಹೊಸದುರ್ಗ ಶ್ರೀಕ್ಷೇತ್ರ ಭಗೀರಥಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರು, ಹಾಗೂ ಬಸವಕೇಂದ್ರದ ಚರಮೂರ್ತಿಗಳಾದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಿತು. ಕುರುಬ ಸಂಸ್ಕøತಿಯ ಡೊಳ್ಳು ಬಾರಿಸುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು.
ಇದೊಂದು ಪುಣ್ಯಕ್ಷೇತ್ರವಾಗುವುದರಲ್ಲಿ ಸಂದೇಹವಿಲ್ಲ:
ಧರ್ಮಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಕೆ.ಎಸ್. ಈಶ್ವರಪ್ಪ ಲೋಕಾರ್ಪಣೆಗೊಂಡಿರುವ ಶ್ರೀ ಬೀರಲಿಂಗೇಶ್ವರ ದೇವಾಲಯದಲ್ಲಿ ಹಲವು ವಿಶೇಷತೆಗಳಿದ್ದು,ಯಾವುದೇ ಪ್ರಚಾರ ಬಯಸದೇ ಏನೂ ಮಾಡಲಾಗುದು ಎನ್ನುವ ಜಾಗದಲ್ಲಿ ಒಂದು ಪ್ರವಾಸಿ ತಾಣದಂತೆ ದೇವಾಲಯವನ್ನು ನಿರ್ಮಿಸಿರುವ ಯುವಸಮೂಹದ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇದೊಂದು ಪುಣ್ಯ ಕ್ಷೇತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.
ಇಲ್ಲಿ ಪಕ್ಷಬೇಧ ಮರೆತು ಸಮಾಜದ ಎಲ್ಲ ಯುವಕರೂ ಸೇರಿದ್ದಾರೆ. ಬೀರಪ್ಪನ ನೆಪದಲ್ಲಿ ಸಂಘಟನೆಯಾಗಿದೆ. ಸಮುದಾಯ ಬಲಿಷ್ಠವಾಗಿ ಸಂಘಟನೆಯಾಗುವ ವಿಶ್ವಾಸವಿದೆ ಎಂದರು.
ಅರ್ಚಕನಿಗೆ ದೇವರು ಒಲಿಯಲಿಲ್ಲ…
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಶಿವಮೊಗ್ಗದಲ್ಲಿ ಅದ್ಭುತ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ದೇವರನ್ನು ನಿತ್ಯ ಪೂಜಿಸುವ ಅರ್ಚಕನಿಗೆ ದೇವರು ಒಲಿದ ನಿದರ್ಶನ ತೀರಾ ಕಡಿಮೆ. ಭಕ್ತಿಯಿಂದ ನಮಿಸಿದ ಭಕ್ತನಿಗೆ ದೇವರು ಸುಲಭವಾಗಿ ಒಲಿಯುತ್ತಾನೆ. ನೂತನ ದೇವಾಲಯವು ಪುಣ್ಯಕ್ಷೇತ್ರವಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ. ಭಕ್ತ ಹೇಗಿರಬೇಕು ಎನ್ನುವುದರ ಸಂಕೇತವಾಗಿ ದೇವಾಲಯದಲ್ಲಿ ಕನಕನನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯವನ್ನು ಎಷ್ಟೇ ದುಡ್ಡಿದ್ದರೂ ಒಬ್ಬರೇ ನಿರ್ಮಾಣ ಮಾಡಬಾರದು. ಸಮಾಜದ ಹಲವರು ಸೇರಿ ನಿರ್ಮಿಸಿದರೆ ಸುಂದರ ದೇವಾಲಯ ನಿರ್ಮಾಣವಾಗಲಿದೆ ಎನ್ನುವುದಕ್ಕೆ ಇದೊಂದು ನಿದರ್ಶನ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಮಾತನಾಡಿ, ದೇವಾಲಯವನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು, ಮುಂದೆಯೂ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ರೂಪಿಸಕೊಂಡು ಹೋಗಬೇಕೆಂದು ದೇವಾಲಯ ಸಮಿತಿಯವರಿಗೆ ಕಿವಿಮಾತು ಹೇಳಿದರು.
ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್ ಮಾತನಾಡಿ, ಕೊರೋನಾ ಮಹಾಮಾರಿ ನಮಗೆಲ್ಲ ಸಾಕಷ್ಟು ಪಾಠಗಳನ್ನು ಕಲಿಸಿದೆ. ಕೊರೋನಾ ವೈರಸ್‍ನ ಭೀತಿ ದೂರವಾದ ನಂತರ ಇಂತಹದ್ದೊಂದು ದೇವಾಲಯ ಲೋಕಾರ್ಪಣೆಗೊಳ್ಳುತ್ತಿದೆ. ಎಲ್ಲರೂ ಜಾತ್ಯತೀತವಾಗಿ ಭಗವಂತನನ್ನು ಆರಾಧಿಸೋಣ ಎಂದರು.
ದೈವ, ಪಿತೃ, ಗುರು ಋಣ ತೀರಿಸಬೇಕು:
ಹೊಸದುರ್ಗ ಶ್ರೀಕ್ಷೇತ್ರ ಭಗೀರಥಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಪಂಚಭೂತಗಳಿಂದಾಗಿರುವ ಈ ಜಗತ್ತಿನಲ್ಲಿ ನಾವು ಪಂಚಭೂತಗಳನ್ನು ಆರಾಧಿಸಬೇಕು. ಪ್ರತಿ ಮನುಷ್ಯ ತನ್ನ ಪಿತೃಗಳ ಕುಲದೇವರ ಹಾಗೂ ಕುಲಗುರುಗಳ ಋಣವನ್ನು ತೀರಿಸಲೇಬೇಕು. ಆ ಮೂಲಕ ಮೌಲ್ಯಾಧಾರಿತ ಬದುಕನ್ನು ನಡೆಸಬೇಕೆಂದರಲ್ಲದೆ, ಪ್ರಚಾರ ಬಯಸದೇ ಇಂತಹದ್ದೊಂದು ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.
ಡೊಳ್ಳು ಸಂಸ್ಕøತಿ ಮರೆಯಾಗದಂತೆ ನೋಡಿಕೊಳ್ಳಬೇಕು…
ಬಸವಕೇಂದ್ರದ ಚರಮೂರ್ತಿಗಳಾದ ಶ್ರೀ ಬಸವ ಮರುಳಸಿದ್ದಸ್ವಾಮೀಜಿಗಳು ಆಶೀರ್ವಚನ ನೀಡಿ, ಕಾರ್ಯಕ್ರಮವನ್ನು ಕುರುಬ ಸಂಸ್ಕøತಿಯ ಸಂಕೇತವಾದ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದ್ದು ಅತ್ಯಂತ ಸಂತೋಷದ ವಿಷಯ. ಇತ್ತೀಚಿನ ದಿನಗಳಲ್ಲಿ ಜಾಂಬ್ ಮೇಳದ ಅಬ್ಬರದಲ್ಲಿ ಡೊಳ್ಳು ಸಂಸ್ಕøತಿ ಮರೆಯಾಗುತ್ತಿದೆ. ಜಾಂಬ್ ಮೇಳೆ ಅಪಭ್ರಂಶದ ನಾದ ಹೊರಡಿಸುತ್ತದೆ. ಡೊಳ್ಳಿನಿಂದ ಹಿತವಾದ ನಾದ ಹೊಮ್ಮುತ್ತದೆ. ಈ ಸಂಸ್ಕøತಿ ಮರೆಯಾಗದಂತೆ ನೋಡಿಕೊಳ್ಳಬೇಕಿದೆ. ಜಾಂಬ್ ಮೇಳವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಮಾಡಬೇಕಿದೆ ಎಂದರು.
ಕುರುಬ ಮತ್ತು ಲಿಂಗಾಯಿತ ಸಂಸ್ಕøತಿಗಳಲ್ಲಿ ಸಾಮ್ಯತೆ ಇದೆ. ಒಬ್ಬ ಗುರು ಹೇಗಿರಬೇಕು ಎನ್ನುವುದಕ್ಕೆ ಸೂಕ್ತ ನಿದರ್ಶನ ಶ್ರೀ ರೇವಣಸಿದ್ದರು. ಒಬ್ಬ ಭಕ್ತ ಹೇಗಿರಬೇಕು ಎನ್ನುವುದಕ್ಕೆ ಕನಕದಾಸರಿಗಿಂತ ಉತ್ತಮ ನಿದರ್ಶನ ಸಿಗುವುದಿಲ್ಲ. ಎಲ್ಲರನ್ನು ನಮ್ಮವರೆಂದು ಹೇಳಿಕೊಳ್ಳುವ ಸಂಸ್ಕøತಿ ಹಾಲುಮತದ್ದು. ಭಕ್ತರು ಬಯಸಿದಾಗ ಭಕ್ತನ ಮನೆಗೆ ಹೋಗುವ ಚಲನಶೀಲ ದೇವರು ಬೀರಪ್ಪ ದೇವರು. ಇಂತಹ ವಿಭಿನ್ನ ಮತ್ತು ವಿಶಿಷ್ಠ ಸಂಸ್ಕøತಿ ಹೊಂದಿರುವ ಹಾಲುಮತ ಸಂಸ್ಕøತಿ ಉಳಿಸಿ ಬೆಳೆಸಬೇಕೆಂದರು.
ಕೂಡಿ ಬಾಳುವುದನ್ನು ರೂಢಿಸಿಕೊಳ್ಳಿ…
ಕಾಗಿನೆಲೆ ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ದೇವಾಲಯದ ಲೋಕಾರ್ಪಣೆಗೆ ಹಲವರು ದೇವಾನು ದೇವತೆಗಳು ಬಂದಿವೆ. ದೇವರಲ್ಲಿ ರಾಗ-ದ್ವೇಷಗಳಿಲ್ಲ. ಮನುಷ್ಯ ಕೂಡಿ ಬಾಳಬೇಕು. ಹೊಂದಾಣಿಕೆ ಇರಬೇಕು. ದೇವಾಲಯ ನಿರ್ಮಾಣಕ್ಕೆ ಬೇರೆ ಬೇರೆ ಸಮುದಾಯದವರು ದಾನ ನೀಡಿದ್ದಾರೆ. ಎಲ್ಲರನ್ನು ಒಪ್ಪಿಕೊಳ್ಳುವವರು ಹಾಲುಮತದವರು ಎಂದರು.ಹಾಲುಮತ ಸಂಸ್ಕøತಿ ಜಗತ್ತಿನ ವಿಭಿನ್ನ ಸಂಸ್ಕøತಿ. ಇಲ್ಲಿ ನಮ್ಮ ಸಂಸತ್‍ನ ವ್ಯವಸ್ಥೆಯಿದೆ. ಒಡೆಯರ್ ರಿಂದ ಯಜಮಾನನ ವರೆಗೆ ಹಲವು ಮಜಲುಗಳಿವೆ ಎಂದ ಅವರು, ದೈವೇಚ್ಛೆಯಂತೆ ಇಲ್ಲಿ ತೆಗೆದುಹಾಕಬೇಕೆಂದಿದ್ದ ಕಲ್ಲಿನಲ್ಲಿ ಬಯಲು ಲಿಂಗದ ನಿರ್ಮಾಣವಾಗಿದೆ. ಇದು ದ್ವಾದಶಲಿಂಗಗಳಂತೆ ಹದಿಮೂರನೇ ಲಿಂಗವಾಗಿ ಪುಣ್ಯಕ್ಷೇತ್ರವಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಪ್ರಮುಖರಾದ ಕೆ.ಇ. ಕಾಂತೇಶ್, ಕೆ.ಜಿ. ಕುಮಾರಸ್ವಾಮಿ, ಪಿ. ಮೈಲಾರಪ್ಪ, ನವುಲೆ ಈಶ್ವರಪ್ಪ, ಕೆ. ರಂಗನಾಥ್, ಡಾ. ಸೌಮ್ಯ ಪ್ರಶಾಂತ್, ಎಂ. ಶರತ್, ಸಿ.ಹೆಚ್. ಮಾಲತೇಶ್, ಡಿ.ಸೋಮಸುಂದರ್, ರೇಖಾ ರಂಗನಾಥ್, ರಾಹುಲ್ ಪಿ. ಬಿದರೆ, ನಾಗರಾಜ್ ಕಂಕಾರಿ, ಕುಮಾರ್, ಹೆಚ್. ಫಾಲಾಕ್ಷಿ, ರಾಮಕೃಷ್ಣ ಮೂಡ್ಲಿ, ಬೊಮ್ಮನಕಟ್ಟೆ ಮಂಜುನಾಥ್ ಸೇರಿದಂತೆ ಹಲವರಿದ್ದರು.