ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿರುವ ಖಾಲಿ ನಿವೇಶನ ಹಂಚಿಕೆಯಲ್ಲಿ ಆಗಿರುವ ಅವ್ಯವಹಾರ ಕುರಿತು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಎಪಿಎಂಸಿ ವರ್ತಕರು ಇಂದು ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಬೆಲೆ ಬಾಳುವ ಕಾರ್ನರ್ ಸೈಟ್ ಗಳು ಸೇರಿದಂತೆ 9 ನಿವೇಶನಗಳು ಹಂಚಿಕೆಗೆ ಟೆಂಡರ್ ಕರೆದಿದ್ದು, ಹಂಚಿಕೆ ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ನಡೆದಿದೆ. ಉದ್ದೇಶಪೂರ್ವಕವಾಗಿ ಹಂಚಿಕೆಯನ್ನು ಪಾರದರ್ಶಕವಾಗಿ ಮಾಡಿಲ್ಲ. ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಬಗ್ಗೆ ಟೆಂಡರ್ ಪ್ರಕ್ರಿಯೆಯನ್ನು ಸಾರ್ವಜನಿಕರ ಗಮನಕ್ಕೆ ತರದೇ ಕುಂಟು ನೆಪ ಹೇಳಿ ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂದು ವರ್ತಕರು ದೂರಿದರು.ಹಂಚಿಕೆ ಪ್ರಕ್ರಿಯೆ ಸ್ಥಗಿತಗೊಳಿಸಿ ಮರು ಟೆಂಡರ್ ಅನ್ನು ಪಾರದರ್ಶಕವಾಗಿ ಕರೆದು ನಿವೇಶನ ಹಂಚಿಕೆ ಮಾಡುವಂತೆ ವರ್ತಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಹಲವಾರು ವರ್ಷಗಳಿಂದ ಸೆಸ್ ಕಟ್ಟುತ್ತಾ ಬಂದಿದ್ದು ಖಾಲಿ ನಿವೇಶನ ಕೊಡಿ ಎಂದು ಹಲವು ಬಾರಿ ಬೇಡಿಕೆ ಇಟ್ಟಿದ್ದೇವೆ. ಸುಮಾರು ವರ್ತಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇಲ್ಲಿಯವರೆಗೆ ನಿವೇಶನ ಕೊಟ್ಟಿರುವುದಿಲ್ಲ. ಸರ್ಕಾರದಿಂದಾಗಲೀ ಅಥವಾ ಸಮಿತಿಯಿಂದಾಗಲೀ ಯಾವುದೇ ಬದಲಾವಣೆಗಳಾದರೂ ಮಾರುಕಟ್ಟೆ ರಿಪೋರ್ಟ್ ನಲ್ಲಿ ತಿಳಿಸುತ್ತಾರೆ. ಅಥವಾ ಪ್ರತ್ಯೇಕಜ ನೋಟಿಸ್ ಕಳಿಸುತ್ತಾರೆ. ಆದರೆ, ಸಮಿತಿಯಿಂದ ನಿವೇಶನ ಹರಾಜು ಪ್ರಕ್ರಿಯೆ ಬಗ್ಗೆ ಯಾವುದೇ ಬಹಿರಂಗ ಪ್ರಕಟಣೆಯಾಗಲೀ ಅಥವಾ ಸ್ಥಳದಲ್ಲಿ ಮಾಹಿತಿಯಾಗಲೀ ನೋಟಿಸ್ ಬೋರ್ಡ್ ನಲ್ಲಿ ಕೂಡ ಯಾವುದೇ ಮಾಹಿತಿ ನೀಡದೇ ಕಾನೂನು ಬಾಹಿರವಾಗಿ ಅತ್ಯಂತ ಕಡಿಮೆ ದರದಲ್ಲಿ ನಿವೇಶನ ಹಂಚಿಕೆ ಮಾಡಿರುತ್ತಾರೆ.

ಆದ್ದರಿಂದ ಈ ಕೂಡಲೇ ಕಾರ್ಯದರ್ಶಿಗಳು ಈ ಅಕ್ರಮ ಹಂಚಿಕೆ ತಡೆದು ಹೊಸದಾಗಿ ಅರ್ಜಿ ಕರೆಯುವಂತೆ ಆದೇಶಿಸಬೇಕು ಎಂದು ವರ್ತಕರು ಆಗ್ರಹಿಸಿದರು.ಇಲ್ಲದಿದ್ದರೆ ಸುಮಾರು ವರ್ಷಗಳಿಂದ ಎಪಿಎಂಸಿಯಲ್ಲಿ ವ್ಯವಹಾರ ಮಾಡುತ್ತಿರುವ ವರ್ತಕರಿಗೆ ಅನ್ಯಾಯವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ವರ್ತಕರ ಬಳಿ ದಾಖಲಾತಿಗಳಿವೆ. ಮರು ಹಂಚಿಕೆ ಮಾಡದಿದ್ದರೆ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ವರ್ತಕರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಪ್ರಮುಖ ವರ್ತಕರಾದ ಮಲ್ಲಿಕಾರ್ಜುನ್, ನಾರಾಯಣ ಗೌಡ, ಶ್ರೀರಾಮ್, ರಮೇಶ್ ನಾಯಕ್, ಗಣೇಶ್, ಗುರು, ಸುಧಾಕರ್, ಸುರೇಶ್, ಲೆಕ್ಕ ಪರಿಶೋಧಕ ಕೆ.ವಿ. ವಸಂತಕುಮಾರ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…