ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಹೊಸ ಮುಖದ ಅನ್ವೇಷಣೆಯಲ್ಲಿರುವ ಕ.ಸಾ.ಪ ಸದಸ್ಯರು ಈ ಬಾರಿ ಹಣ, ಹೆಂಡ, ಜಾತಿಯ ಲಾಭಿಯನ್ನು ದೂರವಿಟ್ಟು ಅಚ್ಚರಿಯ ಫಲಿತಾಂಶದೊಂದಿಗೆ ನನ್ನನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸುತ್ತಾರೆ ಎಂದು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸ್ಥಾನದ ಸ್ಪರ್ಧಾಳು ಶಿ.ಜು ಪಾಶ ಆತ್ಮ ವಿಶ್ವಾಸದಿಂದ ಹೇಳಿದರು.

ಅವರು ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ನಂತಹ ಸಾಂಸ್ಕೃತಿಕ ಕ್ಷೇತ್ರವು ಕೂಡಾ ಹಣ, ಹೆಂಡ, ಜಾತಿ ಅಲ್ಲದೆ, ರಾಜಕೀಯಕ್ಕೂ ಪ್ರವೇಶ ಮಾಡಿರುವುದು ಅತ್ಯಂತ ದುರಂತವಾಗಿದೆ. ಈ ಬಾರಿ ಸದಸ್ಯರು ಇಂತಹ ವಾತಾವರಣಕ್ಕೆ ಬಲಿಯಾಗದೆ ಜಾತಿಯ ಭೂತಗಳಿಗೆ ಚಳಿ ಬಿಡಿಸಲಿದ್ದು, ಕ.ಸಾ.ಪ ಕ್ಕೆ ತಗಲಿರುವ ನೀಚ ರಾಜಕಾರಣವನ್ನು ದೂರ ಇಡಲಿದ್ದಾರೆ. ಆದ್ದರಿಂದಲೇ ಹೊಸ ಮುಖದ ಅನ್ವೇಷಣೆಯಲ್ಲಿರುವ ಅವರು ಅಚ್ಚರಿಯ ಫಲಿತಾಂಶ ನೀಡಲಿದ್ದು, ತಾವು ಗೆಲ್ಲುವುದು ಖಚಿತ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸೈಯದ್ ಜುಬೇರ್ ಪಾಶ…

ಈಗಾಗಲೇ ಶೇಕೆ 80 ರಷ್ಟು ಮತದಾರರನ್ನು ಭೇಟಿಯಾಗಿದ್ದೇನೆ. ಬಹುತೇಕ ಎಲ್ಲರ ಮನಸ್ಸಿನಲ್ಲಿಯೂ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಇಬ್ಬರು ಮಾಜಿ ಅಧ್ಯಕ್ಷರ ಬಗ್ಗೆ ಆಕ್ರೋಶಗೊಂಡು ಬದಲಾವಣೆ ಬಯಸಿದ್ದಾರೆ. ಈ ಹಿಂದೆ ಈ ಇಬ್ಬರು ಮಾಡಿದ ಕೆಲಸಗಳ ಬಗ್ಗೆ ಟೀಕಿಸುತ್ತಿದ್ದಾರೆ. ಅವರು ಗೆಲ್ಲಲು ವಾಮಮಾರ್ಗ ಅನುಸರಿಸುತ್ತಿರುವುದನ್ನು ಕಂಡು ಬೇಸರಗೊಂಡಿದ್ದಾರೆ. ಇಂತವರು ಗೆದ್ದರೆ ಕ.ಸಾ.ಪ. ಹೇಗೆ ಉಳಿದೀತು ಎಂಬ ಆತಂಕದಲ್ಲಿದ್ದಾರೆ. ಹಾಗಾಗಿ, ತಾವು ಗೆಲ್ಲುವುದು ದಿಟ ಎಂದರು.ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ ಹಲವು ಬದಲಾವಣೆಗಳನ್ನು ಖಂಡಿತವಾಗಿ ತರುತ್ತೇನೆ. ಸಾಹಿತಿಯಾಗಿ, ಕವಿಯಾಗಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ನನಗೆ ಮೊದಲಿನಿಂದಲೂ ಸಾಹಿತ್ಯ ಕ್ಷೇತ್ರದ ಬಗ್ಗೆ ಒಲವು ಹೆಚ್ಚಾಗಿದೆ. ಹಾಗಾಗಿಯೇ ಕನ್ನಡದ ನೆಲ, ಜಲ ಸಂಸ್ಕೃತಿಯ ಕೆಲಸಗಳಾಗಬೇಕು. ಸಮಕಾಲೀನ ಬಿಕ್ಕಟ್ಟುಗಳಿಗೆ ಪರಿಷತ್ತು ಉತ್ತರವಾಗಬೇಕು.

ಕನ್ನಡ ಭಾಷೆ ಉಸಿರಾಡುತ್ತಿರಬೇಕು. ಪ್ರತಿ ಜಿಲ್ಲೆ ತಾಲ್ಲೂಕಗಳಲ್ಲಿ ಪುಸ್ತಕ ಸಂತೆ ಹಮ್ಮಿಕೊಳ್ಳುವುದು, ಹಿರಿಯ-ಕಿರಿಯ ಲೇಖಕರಿಗೆ ಆದ್ಯತೆ, ಎಲ್ಲ ವಯೋಮಾನದವರ ಸಮ್ಮೇಳನ, ಮಹಿಳೆಯರಿಗೆ ಆದ್ಯತೆ ಇವು ನನ್ನ ಪ್ರಮುಖ ಕೆಲಸವಾಗಿವೆ. ಮತ್ತು ಪ್ರಣಾಳಿಕೆಯಾಗಿದೆ ಎಂದರು. ಇದಲ್ಲದೆ ಹಳೆಗನ್ನಡ ಸಾಹಿತ್ಯಕ್ಕೆ ಆದ್ಯತೆ, ಕನ್ನಡ ಶಾಲೆಗಳ ಉಳಿವು, ಯುವ ಕವಿಗಳಿಗೆ, ಲೇಖಕರಿಗೆ ಪ್ರೋತ್ಸಾಹ ಧನ, ಪುಸ್ತಕ ಜೊಳಿಗೆ ಅಭಿಯಾನ, ಶಾಲಾ-ಕಾಲೇಜುಗಳಲ್ಲಿ ಸಾಹಿತ್ಯ ಸಮ್ಮೇಳನ, ಕ.ಸಾ.ಪ. ಸದಸ್ಯರಿಗೆ ಆರೋಗ್ಯ ವಿಮೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಕನಸು ಕಂಡಿರುವೆ. ಮತ್ತು ಈ ಎಲ್ಲಾ ಕೆಲಸಗಳನ್ನು ಯಾರೇ ಗೆಲ್ಲಲಿ ಮಾಡಬಹುದಾಗಿದೆ ಎಂದರು.

ಪತ್ರಿಕಾಗೊಷ್ಠಿಯಲ್ಲಿ ಹಿರಿಯ ಪತ್ರಕರ್ತ ಜಿ.ಪದ್ಮನಾಭ, ಜಿ.ಚಂದ್ರಶೇಖರ್, ಎಸ್.ಕೆ ಗಜೇಂದ್ರ ಸ್ವಾಮಿ, ಮತ್ತು ಕೆ.ನಾಗರಾಜ್, ದುರ್ಗಾ ಪ್ರಿಂಟರ್ಸ್ ಶ್ರೀನಿವಾಸ್ ಇದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…