ಶಿವಮೊಗ್ಗ: ಸಹಕಾರ ಕ್ಷೇತ್ರಕ್ಕೆ ಬಿಗಿ ಕಾಯ್ದೆಗಳ ಅವಶ್ಯಕತೆ ಇದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.ಅವರು ಇಂದು ಸಹಕಾರ ಭಾರತಿ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ರಾಜ್ಯ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಅನೇಕ ಸಹಕಾರಿಗಳು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಸಹಕಾರ ಮನೋಭಾವನೆ ಇದ್ದರೆ ಮಾತ್ರ ಸಹಕಾರ ಸಂಸ್ಥೆಗಳು ಬೆಳೆಯಲು ಸಾಧ್ಯ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಸಹಕಾರ ಕ್ಷೇತ್ರ ಉತ್ತಮವಾಗಿ ಬೆಳೆದಿದೆ. ಆದರೆ, ಇಲ್ಲಿಯೂ ಕೂಡ ಸಾಕಷ್ಟು ನ್ಯೂನತೆಗಳಿವೆ. ಕಬ್ಬಿಣವನ್ನು ಚಿನ್ನ ಮಾಡುವ ಖದೀಮರೂ ಇದ್ದಾರೆ. ಇಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ. ಈ ಕ್ಷೇತ್ರದಲ್ಲಿದ್ದುಕೊಂಡು ಸಾಕಷ್ಟು ಭ್ರಷ್ಟಾಚಾರ ಮಾಡಿ ಮತ್ತೆ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸುವವರೂ ಇದ್ದಾರೆ ಎಂದು ಟೀಕಿಸಿದ್ದಾರೆ.ಸಹಕಾರ ಕ್ಷೇತ್ರ ಉಳಿಯಬೇಕು ಎಂದರೆ ಇಲ್ಲಿರುವ ಮತ್ತು ಈಗಿರುವ ಕಾಯ್ದೆಗಳು ಬಿಗಿಯಾಗಬೇಕಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ನಿಟ್ಟಿನತ್ತ ಈಗಾಗಲೇ ಯೋಚಿಸುತ್ತಿವೆ.

ಕೇಂದ್ರದ ಸಹಕಾರ ಸಚಿವ ಅಮಿತ್ ಶಾ ಕೂಡ ಸಹಕಾರ ಕ್ಷೇತ್ರದ ನ್ಯೂನತೆಗಳ ಸರಿಪಡಿಸಬೇಕು. ಕಾಯ್ದೆಗಳ ಪುನರ್ ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ. ಅವರ ಮಾತುಗಳು ಸಹಕಾರ ಕ್ಷೇತ್ರದ ಸಂಚಲನಕ್ಕೆ ಕಾರಣವಾಗಿವೆ ಎಂದರು.ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಹೆಚ್ಚಿನ ರೀತಿಯ ನೆರವು ಬೇಕಾಗುತ್ತದೆ. ಅಪೆಕ್ಸ್, ಡಿಸಿಸಿ ಬ್ಯಾಂಕ್ ಮುಂತಾದವುಗಳು ರೈತರ ಸಂಕಷ್ಟಕ್ಕೆ ಧಾವಿಸಬೇಕು. ಎಲ್ಲಿ ಅಸಹಕಾರ ಇರುತ್ತದೆಯೋ ಅಲ್ಲಿ ಸಹಕಾರ ಸಂಸ್ಥೆಗಳು ಬೆಳೆಯಲು ಸಾಧ್ಯವೇ ಇಲ್ಲ. ಸೇವೆ ಇದರ ಪ್ರಮುಖವಾದ ಗುರಿ. ಇಂತಹ ಸೇವೆ ಸಹಕಾರ ಕ್ಷೇತ್ರಕ್ಕೆ ಬರಲಿ ಎಂದರು.ಸಹಕಾರ ಭಾರತಿ ಅನೇಕ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈಗಾಗಲೇ ಅವರ ಹಲವು ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಡೇರಿಸುವ ನಿಟ್ಟಿನತ್ತ ಕೆಲಸ ಮಾಡುತ್ತಿವೆ. ಶಿವಮೊಗ್ಗ ಜಿಲ್ಲೆ ಸಹಕಾರ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಸಚಿವ ಕೆ.ಎಸ್. ಈಶ್ವರಪ್ಪನವರೂ ಸಹಕಾರಿಗಳ ಮನೆಗೆದ್ದಿದ್ದಾರೆ. ಸಂಘಟನೆಗಳು ಮತ್ತಷ್ಟು ಬಲಗೊಳ್ಳಬೇಕು. ಪ್ರಾಮಾಣಿಕತನ ಸಹಕಾರ ಕ್ಷೇತ್ರದಲ್ಲಿ ಹೆಚ್ಚಾಗಬೇಕು. ಆಗ ಮಾತ್ರ ಈ ಕ್ಷೇತ್ರ ಉಳಿಯಲು ಸಾಧ್ಯ. ಸಹಕಾರಿಗಳ ಜೊತೆ ನಮ್ಮ ಸರ್ಕಾರ ಯಾವಾಗಲೂ ಇರುತ್ತದೆ ಎಂದರು.

ಸಹಕಾರ ಭಾರತಿ ರಾಜ್ಯ ಬಿ.ಹೆಚ್. ಕೃಷ್ಣಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರ ಕ್ಷೇತ್ರ ಬೆಳೆಯಲು ಸರ್ಕಾರದ ಸಹಕಾರ ಬೇಕಾಗಿದೆ. ಇಲ್ಲಿರುವ ಅನೇಕ ಕಾಯ್ದೆಗಳು ತಿದ್ದುಪಡಿಯಾಗಬೇಕಾಗಿದೆ. ಸರ್ಕಾರ ಸೌಲತ್ತುಗಳ ನೀಡಬೇಕಾಗಿದೆ. ಈ ಹಿನ್ನಲೆಯಲ್ಲಿ ಸಹಕಾರ ಭಾರತಿ ಯಶಸ್ವಿನಿ ಯೋಜನೆಯನ್ನು ಪುನಃ ನೀಡಲು, ಸಹಕಾರ ವಿವಿ ಸ್ಥಾಪಿಸಲು, ಸಂಶೋಧನಾ ಕೇಂದ್ರ ಸ್ಥಾಪಿಸಲು, ಶಿಕ್ಷಣ ಕ್ಷೇತ್ರದಲ್ಲಿ ಸಹಕಾರ ವಿಷಯ ಒಂದು ಪಠ್ಯವನ್ನಾಗಿ ಸೇರ್ಪಡೆ ಮಾಡಲು ಒತ್ತಾಯಿಸುತ್ತದೆ. ಅಲ್ಲದೇ, ಆದಾಯ ತೆರಿಗೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ನೂತನ ಪಾಲಿಸಿ ಆರಂಭಿಸಬೇಕು. ಸುಮಾರು 32 ಕೋಟಿ ಸಹಕಾರಿಗಳಿರುವ ಈ ಕ್ಷೇತ್ರಕ್ಕೆ ಎರಡು ರಾಜ್ಯಸಭಾ ಹಾಗೂ ವಿಧಾನ ಪರಿಷತ್ ಸದಸ್ಯಸ್ಥಾನ ನೀಡಬೇಕು ಎಂದರು.ರಾಜ್ಯಮಟ್ಟದ ಇಂದಿನ ಅಧಿವೇಶನದಲ್ಲಿ ಸಹಕಾರ ಕ್ಷೇತ್ರದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುತ್ತದೆ. ಇದು ಯಾವುದೇ ರಾಜಕೀಯ ಕಾರ್ಯಕ್ರಮ ಅಲ್ಲ. ಮತ್ತು ಚುನಾವಣೆ ಘೋಷಣೆಯಾಗುವುದಕ್ಕೆ ಮೊದಲೇ ಈ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು ಎಂದರು.

ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಬದಲಾವಣೆ ಬೇಕಾಗಿದೆ. ಕಾನೂನು ಕಟ್ಟಳೆ ಸಹಕಾರ ಕ್ಷೇತ್ರದಲ್ಲಿ ಬಿಗಿಯಾಗಬೇಕು. ದೊಡ್ಡ ದೊಡ್ಡ ಸಕ್ಕರೆ ಕಾರ್ಖಾನೆಗಳಿಗೆ ದೊಡ್ಡ ಮಟ್ಟದ ಸಾಲ ಕೊಡುವ ಸಹಕಾರ ಸಂಸ್ಥೆಗಳು ಒಬ್ಬ ನಿರುದ್ಯೋಗಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ. ಸಹಕಾರ ಕ್ಷೇತ್ರವನ್ನು ಕೆಲವರು ಲೂಟಿ ಮಾಡುತ್ತಿದ್ದಾರೆ ಎಂದರು.ಇದನ್ನೆಲ್ಲ ತಡೆಯಲು ಸಹಕಾರಿಗಳೆಲ್ಲಾ ಒಗ್ಗಟ್ಟಾಗಬೇಕಾಗಿದೆ. ಈ ಪವಿತ್ರ ಕ್ಷೇತ್ರವನ್ನು ಉಳಿಸುವ ನಿಟ್ಟಿನಲ್ಲಿ ಕಾನೂನು ಬಿಗಿ ಮಾಡಬೇಕು. ಇದರ ಬಗ್ಗೆ ಚರ್ಚಿಸಿ ಸಿಎಂ ಬಳಿ ಬಂದರೆ ಅಗತ್ಯ ಸಹಕಾರ ಕೊಡುತ್ತೇವೆ. ಕೇಂದ್ರ ಸಚಿವ ಅಮಿತ್ ಶಾ ಅವರೂ ಇದಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಹಕಾರ ಭಾರತಿ ಲಾಂಛನ ಬಿಡುಗಡೆ ಮಾಡಲಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ, ಸಹಕಾರ ಭಾರತಿ ಜಿಲ್ಲಾಧ್ಯಕ್ಷ, ಹೆಚ್.ಎಸ್. ಮಹೇಶ್, ಅಧಿವೇಶನ ಸಂಚಾಲಕ ಎ.ಆರ್. ಪ್ರಸನ್ನಕುಮಾರ್, ರಾಜ್ಯ ಉಪಾಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ,  ರಾಷ್ಟ್ರೀಯ ಉಪಾಧ್ಯಕ್ಷ ಎನ್.ಡಿ. ಠಾಕೂರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉದಯ್ ಜೋಶಿ ಸೇರಿದಂತೆ ಹಲವರದಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…