ಶಿವಮೊಗ್ಗ: ಎರಡು ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಇಂದು ಮತ್ತು ನಾಳೆ ದೇಶವ್ಯಾಪಿ ಬ್ಯಾಂಕ್ ನೌಕರರ ಸಂಘಟನೆ ಮುಷ್ಕರಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ನಗರದ ಬಿಹೆಚ್ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಭಾಗ ಹಾಗೂ ಜಿಲ್ಲಾ ಪಂಚಾಯಿತಿ ಮುಂಭಾಗ ಇರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಬ್ಯಾಂಕ್ ನೌಕರರ ಸಂಘಗಳ ಸಂಯುಕ್ತ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀಡಿ, ಜನ ವಿರೋಧಿ ಬ್ಯಾಂಕಿಂಗ್ ನೀತಿ ವಿರುದ್ಧ ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕಿಂಗ್ ನಿಯಮಾವಳಿ ತಿದ್ದುಪಡಿ ಹಿಂಪಡೆಯಬೇಕು. ಸಾರ್ವಜನಿಕ ಬ್ಯಾಂಕ್ ಗಳ ಖಾಸಗೀಕರಣ ಮಾಡಬಾರದು. ಸಾಲ ವಸೂಲಿಗೆ ಕಠಿಣ ಕ್ರಮ ಜಾರಿಗೊಳಿಸಬೇಕು. ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ನೌಕರರು ಒತ್ತಾಯಿಸಿದ್ದಾರೆ.ಸರ್ಕಾರ ಏನಾದರೂ ಖಾಸಗೀಕರಣದ ತಿದ್ದುಪಡಿ ಮಸೂದೆ ಜಾರಿಗೆ ತಂದರೆ ಸರ್ಕಾರ ತನ್ನ ಒಡೆತನದಲ್ಲಿರುವ ಯಾವುದೇ ಸಂಸ್ಥೆಯನ್ನು ತನಗೆ ಬೇಕಾದ ಯಾವುದೇ ವ್ಯಕ್ತಿಗೆ ಮಾರಿಕೊಳ್ಳಬಹುದು. ಈಗಾಗಲೇ ಖಾಸಗಿ ಒಡೆತನದ ಕಂಪನಿಗಳಿಗೆ ಹಲವು ಉಸ್ತುವಾರಿಗಳನ್ನು ಸರ್ಕಾರ ನೀಡಿದೆ.

ಈಗ ಖಾಸಗಿ ಒಡೆತನಕ್ಕೆ ಒಪ್ಪಿಸಿದರೆ ಹುದ್ದೆ ಪಡೆಯಲು ಕೂಡ ಯುವಕರು ಲಂಚ ಕೊಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.ದೇಶದಲ್ಲಿ ಬ್ಯಾಂಕಿಂಗ್ ಸೇವೆ ತುಂಬಾ ಅಗತ್ಯವಾಗಿದ್ದು, ಭಾರತದ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು ಈ ಬ್ಯಾಂಕ್ ಗಳನ್ನೇ ಅವಲಂಬಿಸಿದ್ದಾರೆ. ಆಕಸ್ಮಾತ್ ಖಾಸಗಿ ಒಡೆತನಕ್ಕೆ ಸೇರಿದರೆ ಎಲ್ಲಾ ವರ್ಗದವರಿಗೂಸ ಸೇವೆ ಸಿಗುವುದು ಕಷ್ಟವಾಗುತ್ತದೆ. ಕೆಲವರಿಗೋಸ್ಕರ ಒಳಿತು ಮಾಡಲು ಹೋಗಿ ಹಲವರನ್ನು ಬ್ಯಾಂಕ್ ಕ್ಷೇತ್ರದಿಂದಲೇ ದೂರ ಮಾಡುವ ನಿರ್ಧಾರದ ವಿರುದ್ಧ ಹೋರಾಟ ಅನಿವಾರ್ಯ ಎಂದು ಪ್ರತಿಭಟನಾಕಾರರು ತಿಳಿಸಿದರು.

ಬ್ಯಾಂಕ್ ನೌಕರರ ಸಂಘಟನೆ ಪ್ರಮುಖರಾದ ಪುನೀತ್, ಎಂ.ಆರ್. ಹೆಗ್ಡೆ, ವೇಣುಗೋಪಾಲ್, ಎನ್. ಚಂದ್ರಶೇಕರ್, ಮಹಾಬಲೇಶ್ವರ ಹೆಗ್ಡೆ, ನಿರ್ಮಲಾ, ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ ಸದಸ್ಯರು ಇದ್ದರು.ಬಾಕ್ಸ್:ರಾಷ್ಟ್ರೀಕೃತ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ನೌಕರರ ರಾಷ್ಟ್ರೀಯ ಸಂಘಟನೆ ಕರೆ ಮೇರೆಗೆ ಇಂದು ನಗರದಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಿದ್ದರಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಎಲ್ಲಾ ಬ್ಯಾಂಕ್ ಗಳು ಬಂದ್ ಆಗಿದ್ದವು. ಸಿಬ್ಬಂದಿ ಇಲ್ಲದ ಕಾರಣ ವ್ಯವಹಾರ ನಡೆಯಲಿಲ್ಲ.ಹಣ ಪಾವತಿ, ವಿತ್ ಡ್ರಾ, ಚೆಕ್ ಕ್ಲಿಯರೆನ್ಸ್ ಸೇರಿದಂತೆ ವಿವಿಧ ಹಣಕಾಸು ಸಂಬಂಧಿತ ಕಾರ್ಯಗಳಿಗಾಗಿ ಗ್ರಾಹಕರು ಪರದಾಡುವಂತಾಯಿತು. ಎರಡು ದಿನ ಬ್ಯಾಂಕ್ ಮುಷ್ಕರ ಇರುವುದರಿಂದ ಎಟಿಎಂಗಳಲ್ಲಿಯೂ ನಗದು ಕೊರತೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…