ಶಿವಮೊಗ್ಗ: ಕಾಂಗ್ರೆಸ್ ಶಾಸಕ ಕೆ.ಆರ್. ರಮೇಶ್ ಕುಮಾರ್ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ವಿಧಾನಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಕೆ.ಆರ್. ರಮೇಶ್ ಕುಮಾರ್ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಕೀಳು ಅಭಿರುಚಿಯ ಮಾತನಾಡಿದ್ದಾರೆ. ಇದನ್ನು ಜಿಲ್ಲಾ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಸ್ತ್ರೀಪರವಾದ ಧ್ವನಿ ಎತ್ತಲು ಚುನಾಯಿತ ಪ್ರತಿನಿಧಿಗಳು ಇರಬೇಕು. ಆದರೆ, ರಮೇಶ್ ಕುಮಾರ್ ಅಂತಹವರು ಅಸಹ್ಯ ಹುಟ್ಟಿಸುವಂತಹ ಹೇಳಿಕೆ ನೀಡಿ ಸ್ತ್ರೀ ಕುಲಕ್ಕೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಮೇಶ್ ಕುಮಾರ್ ನಂತಹ ಮನಸ್ಥಿತಿಯ ಸದಸ್ಯರು ಸದನದಲ್ಲಿ ಇರುವ ಅವಶ್ಯಕತೆ ಇಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ರಮೇಶ್ ಬಹಿರಂಗವಾಗಿ ಸ್ತ್ರೀಯರಲ್ಲಿ ಕ್ಷಮೆ ಕೇಳಬೇಕು. ಇವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವಿದ್ಯಾಲಕ್ಷ್ಮಿಪತಿ, ನಗರಾಧ್ಯಕ್ಷೆ ಸುರೇಖಾ ಮುರಳೀಧರ್, ಪ್ರಮುಖರಾದ ಆರತಿ ಪ್ರಕಾಶ್, ರಶ್ಮಿ ಶ್ರೀನಿವಾಸ್, ಗೀತಾ, ವನಜಾಕ್ಷಿ, ಸುಮಾ, ಯಶೋಧಾ, ಸುನಿತಾ, ಮಂಜುಳಾ, ಮಾಲಾ ಮುಂತಾದವರಿದ್ದರು.