ಶಿವಮೊಗ್ಗ: ಕೌಟುಂಬಿಕ ಮೌಲ್ಯ ನಶಿಸುತ್ತಿರುವ ಸಂದರ್ಭದಲ್ಲಿ ಸಮಾಜಕ್ಕೆ ನೀತಿ ಮತ್ತು ಸಂಸ್ಕಾರ, ಸಂಸ್ಕೃತಿಯಲ್ಲಿ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಕರ ಬೋಧನೆ ವಿದ್ಯಾರ್ಥಿಗಳ ಜೀವನದಲ್ಲಿ ಪರಿಣಾಮಕಾರಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಕೆ.ಎನ್. ಸರಸ್ವತಿ ಹೇಳಿದ್ದಾರೆ.
ಅವರು ಇಂದು ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಕಾಲೇಜ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ನ್ಯಾಯವಾದಿಗಳ ಸಂಘ, ಒಕ್ಕಲಿಗರ ಸಂಘ ಮತ್ತು ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳು ಇ –ಗರ್ವನೆನ್ಸ್, ಆರ್.ಟಿ.ಐ. ಹಾಗೂ ಸಿವಿಸಿ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ವೃತ್ತಿ ಜೀವನದ ಜೊತೆಗೆ ಸಮಾಜಕ್ಕೆ ನಾವು ಕೈಲಾದ ಮಟ್ಟಿಗೆ ನಾವು ಏನಾದರೂ ಕೊಡುಗೆ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ. ಜನಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸುವುದು ಕಾನೂನು ಸೇವಾ ಪ್ರಾಧಿಕಾರದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ ಎಂದರು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾವಿರಾರು ಕಾನೂನುಗಳಿವೆ. ನಮಗೆ ಗೊತ್ತಿಲ್ಲದ ಹಾಗೇ ತಾಯಿಯ ಗರ್ಭದಿಂದ ಹಿಡಿದು ಸಾಯುವವರೆಗೆ ಸತ್ತ ನಂತರವೂ ಯಾವುದಾದರೂ ಕಾನೂನಿನ ಅಡಿಯಲ್ಲಿ ಇರುತ್ತೇವೆ. ಜನನ, ಮರಣ ನೋಂದಣಿ ಎಷ್ಟು ಅಗತ್ಯವೋ ಇಷ್ಟ ಪಡಲಿ, ಬಿಡಲಿ ಕಾನೂನಿಲ್ಲದೆ ಜೀವನ ನಡೆಸಲಾಗುವುದಿಲ್ಲ. ಕಾನೂನಿನ ವ್ಯವಸ್ಥೆಗೆ ಅಡಿಪಾಯವೇ ಸಂವಿಧಾನ. ಅನಾದಿ ಕಾಲದಿಂದಲೂ ಮಾನವ ಹಕ್ಕುಗಳು ಇದ್ದೇ ಇದೆ ಎಂದರು.
ನಿಸರ್ಗದಿಂದಲೂ ನಮಗೆ ಅನೇಕ ಹಕ್ಕುಗಳು ಲಭಿಸಿವೆ. ಗೌರವಯುತವಾದ ಜೀವಿಸುವ ಹಕ್ಕು, ಎಲ್ಲಾ ಜಾತಿ, ಧರ್ಮ, ಲಿಂಗ, ಭಾಷೆಯವರಿಗೆ ಕಾನೂನು ಸಮಾನವಾಗಿದೆ. ಮತ್ತೊಬ್ಬ ವ್ಯಕ್ತಿಯ ಹಕ್ಕಿಗೆ ಚ್ಯುತಿ ಮಾಡಲು ಕಾನೂನು ಅವಕಾಶ ಕೊಡಲ್ಲ. ಈ ನಿಟ್ಟಿನಲ್ಲಿ ಮೂಲಭೂತ ಹಕ್ಕು ನೀಡಿದ ಕಾನೂನೇ ಧಕ್ಕೆಯಾಗದ ರೀತಿಯಲ್ಲಿ ಸೂಕ್ತವಾದ ನಿರ್ಬಂಧ ಕೂಡ ವಿಧಿಸಿದೆ ಎಂದರು.ಭ್ರಷ್ಟಾಚಾರ ನಿಯಂತ್ರಣಕ್ಕೆ ಆರ್.ಟಿ.ಐ. ಮೂಲಕ ಪಾರದರ್ಶಕತೆ ಕಾಣುವ ವ್ಯವಸ್ಥೆ ಇದೆ. ಸಿವಿಸಿ ಮೂಲಕ ಭ್ರಷ್ಟಾಚಾರ ನಿಯಂತ್ರಣ ಮಾಡಲು ಕೂಡ ಕಾನೂನು ಇದ್ದು, ಸಿಬಿಐ, ಇಡಿ, ಇವೆಲ್ಲವೂ ಸಿವಿಸಿ ಅಡಿಯಲ್ಲಿ ಕಾರ್ಯಾಚರಿಸುತ್ತವೆ. ಸರ್ಕಾರದ ಎಲ್ಲಾ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪಲು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಇ- ಗವರ್ನೆನ್ಸ್ ಮೂಲಕ ಪಾರದರ್ಶಕತೆ ಅಳವಡಿಸಿಕೊಂಡಿದೆ ಎಂದರು. ವಿಶ್ವ ಮಾನವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವ ಜೊತೆಗೆ ಕಾನೂನಿನಲ್ಲಿ ಮಾನವನ ಕರ್ತವ್ಯಗಳನ್ನು ಸೂಚಿಸಿದ್ದು, ಅದರ ಪಾಲನೆಯೂ ಮುಖ್ಯವಾಗುತ್ತದೆ.
ಬಿಎಡ್ ವಿದ್ಯಾರ್ಥಿಗಳು ಶಿಕ್ಷಕರಾಗಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಕ್ಕಿನ ಜಾಗೃತಿ ಮೂಡಿಸುವುದರಿಂದ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗುತ್ತಾರೆ ಎಂದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್. ಹೊನ್ನಳ್ಳಿ, ಡಾ. ಪರಿಸರ ನಾಗರಾಜ್, ಎನ್. ದೇವೇಂದ್ರಪ್ಪ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎನ್.ಹೆಚ್. ಶ್ರೀಕಾಂತ್, ಸಂಪನ್ಮೂಲ ವ್ಯಕ್ತಿ, ನ್ಯಾಯವಾದಿಗಳಾದ ಜಯಪ್ರಕಾಶ್, ವಸಂತ್ ಕುಮಾರ್, ಪ್ರಾಂಶುಪಾಲ ಮಧು, ಕಾರ್ಯಕ್ರಮಾಧಿಕಾರಿ ಎನ್.ಜೆ. ಪ್ರಕಾಶ್ ಮೊದಲಾದವರಿದ್ದರು.