ಶಿವಮೊಗ್ಗ: ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಇಂದು ರಾತ್ರಿ 10 ಗಂಟೆ ನಂತರ ಯಾವುದೇ ಸಂಭ್ರಮಾಚರಣೆಗೆ ಸಾರ್ವಜನಿಕವಾಗಿ ಆಚರಿಸಲು ನೈಟ್ ಕರ್ಫ್ಯೂ ಇರುವುದರಿಂದ ಅವಕಾಶ ಇಲ್ಲ. ಬಾರ್, ರೆಸ್ಟೋರೆಂಟ್ ಗಳು ಮತ್ತು ಹೋಟೆಲ್ ಗಳು 10 ಗಂಟೆಯೊಳಗೆ ವ್ಯವಹಾರ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಂಜೆ 7.30 ಕ್ಕೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುವುದು. ರಾತ್ರಿ 9.30 ಕ್ಕೆ ವ್ಯಾಪಾರ ಸ್ಥಗಿತಗೊಳಿಸಲು ಸೂಚಿಸಲಾಗುವುದು. 10 ಗಂಟೆಯೊಳಗೆ ಜನ ಮನೆ ಸೇರಿಕೊಳ್ಳಬೇಕು. ಅನವಶ್ಯಕ ಓಡಾಟಕ್ಕೆ ಸಂಪೂರ್ಣ ನಿರ್ಬಂಧವಿದ್ದು, ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಕಟ್ಟುನಿಟ್ಟಿನ ತಪಾಸಣೆ, ಪರಿಶೀಲನೆ ನಡೆಸಲಾಗುವುದು ಎಂದರು.ನಿಯಮ ಉಲ್ಲಂಘಿಸಿ ಅನವಶ್ಯಕವಾಗಿ ಓಡಾಡುವುದು, ಮದ್ಯಪಾನ ಮಾಡಿ ವಾಹನ ಚಾಲನೆ, ಸಂಚರಿಸುವುದನ್ನು ನಿಷೇಧಿಸಲಾಗಿದೆ.

ಅಗತ್ಯಸೇವೆಗೆ ಪಾಸ್ ಪಡೆದು ರಾತ್ರಿ ವೇಳೆ ಸಂಚರಿಸಬಹುದು. ದಾಖಲೆ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಜಾಸ್ತಿಯಾಗಿದೆ. ಪ್ರಕರಣದ ತನಿಖೆಗೆ ಕೇರಳಕ್ಕೆ ಹೋಗಿಬಂದಿದ್ದ ತೀರ್ಥಹಳ್ಳಿ ತನಿಖಾಧಿಕಾರಿ ಓರ್ವರಿಗೆ ಕೊರೋನಾ ದೃಢಪಟ್ಟಿದೆ ಎಂದರು.ಸಾರ್ವಜನಿಕರು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು.

ವರದಿ ಮಂಜುನಾಥ್ ಶೆಟ್ಟಿ…