ಶಿವಮೊಗ್ಗ: ಜಿಲ್ಲೆಯ ಕೇಂದ್ರ ಸ್ಥಾನವಾದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಶುದ್ಧ ನೀರಿನ ಘಟಕ ಹಲವಾರು ತಿಂಗಳಿಂದ ನಿಷ್ಕ್ರಿಯವಾಗಿದ್ದು, ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಮತ್ತು ಹೋರಾಟಗಾರರಿಗೆ ಶುದ್ಧ ಕುಡಿಯುವ ನೀರು ಇಲ್ಲದಂತಾಗಿದೆ.ಲಕ್ಷಾಂತರ ರೂ ವೆಚ್ಚದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕ ಕೆಲವೇ ದಿನಗಳಲ್ಲಿ ಹಾಳಾಗಿದೆ.
ಅದನ್ನು ಪಾಲಿಕೆಯವರು ಸರಿಯಾಗಿ ನಿರ್ವಹಣೆ ಮಾಡಬೇಕಿತ್ತು. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಹೋರಾಟಗಾರರು ಮತ್ತು ಸಾರ್ವಜನಿಕರು ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಜಿಲ್ಲಾಧಿಕಾರಿಗಳು ದುರಸ್ತಿ ಕೈಗೊಳ್ಳಲು ಪಾಲಿಕೆಗೆ ಸೂಚನೆ ನೀಡಿದ್ದಾರೆ. ಆದರೆ, ಯಾವುದೇ ಕ್ರಮಕೈಗೊಳ್ಳದ ಕಾರಣ ಜಿಲ್ಲಾಧಿಕಾರಿ ಕಚೇರಿಗೆ ನಿತ್ಯ ಬರುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಪಾರ್ಕಿಂಗ್ ಅವ್ಯವಸ್ಥೆಯಂತೂ ಹೇಳಲಸಾಧ್ಯ.
ಇವತ್ತು ನೀರಿಗಾಗಿ ಪುಟ್ಟ ಮಕ್ಕಳು ಪರದಾಡುತ್ತಿರುವ ದೃಶ್ಯ ಕಂಡು ಬಂದಿದೆ.ಜಿಲ್ಲಾ ಶಕ್ತಿ ಕೇಂದ್ರದಲ್ಲೇ ಈ ರೀತಿ ಆದರೆ, ಸರ್ಕಾರದ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳುವ ಬಗೆ ಹೇಗೆ ಎಂಬ ಆತಂಕ ಸಾರ್ವಜನಿಕರಿಗೆ ಕಾಡಿದೆ. ಇನ್ನಾದರೂ ಜಿಲ್ಲಾಧಿಕಾರಿಗಳು ಈ ಬಗ್ಗೆ ತುರ್ತು ಗಮನಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.