ಶಿವಮೊಗ್ಗ: ನಗರದ ಉಷಾ ನರ್ಸಿಂಗ್ ಸಮೀಪವಿರುವ ರೈಲ್ವೇ ಗೇಟ್ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಜತೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಕೆ.ಚೇತನ್ ಆಗ್ರಹಿಸಿದ್ದಾರೆ.

ಶಿವಮೊಗ್ಗ – ಸವಳಂಗ ರಸ್ತೆಯ ಉಷಾ ನರ್ಸಿಂಗ್ ಸಮೀಪದಲ್ಲಿ ರೈಲ್ವೇ ಗೇಟ್‌ಅನ್ನು ಕಾಮಗಾರಿ ಪ್ರಯುಕ್ತ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿದೆ. ಇದರಿಂದ ಇದೇ ರಸ್ತೆ ಮಾರ್ಗವನ್ನು ಅವಲಂಬಿಸಿದ್ದ ದಿನ ನಿತ್ಯ ಸಂಚರಿಸುವ ಸಾವಿರಾರು ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಜಿಲ್ಲಾಡಳಿತ ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸವಳಂಗ ರಸ್ತೆ ಮಾರ್ಗದಲ್ಲಿರುವ ರೈಲ್ವೇ ಗೇಟ್ ಮುಖಾಂತರ ದಿನ ನಿತ್ಯ ಸಾವಿರಾರು ಜನರು ನವುಲೆ, ಇಂಜಿನಿಯರಿAಗ್, ಕೃಷಿ ಕಾಲೇಜ್, ಫ್ಯಾಕ್ಟರಿ ಸೇರಿದಂತೆ ವಿವಿಧ ಕೆಲಸಗಳಿಗೆ ಇದೇ ಮಾರ್ಗವನ್ನು ಅವಲಂಬಿಸಿದ್ದರು. ಸಿಟಿ ಬಸ್‌ಗಳು ಸಂಚರಿಸುತ್ತವೆ. ಶಿಕಾರಿಪುರ, ಶಿರಾಳಕೊಪ್ಪ ಹಾಗೂ ಸವಳಂಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ ಇದಾಗಿದೆ. ಜಿಲ್ಲಾಡಳಿತ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸದೇ ಏಕಾಏಕಿ ಈ ಮಾರ್ಗದಲ್ಲಿ ಸಂಚಾರ ನಿಷೇಧಿಸುವುದರಿಂದ ಸಮಸ್ಯೆ ಉಂಟಾಗುತ್ತಿದೆ.

ಪರ್ಯಾಯ ಮಾರ್ಗ ಸೂಚಿಸಿರುವ ರಸ್ತೆಗಳು ಅತ್ಯಂತ ಕಿರಿದಾಗಿದ್ದು, ಬೊಮ್ಮನಕಟ್ಟೆ, ಎಲ್‌ಬಿಎಸ್ ನಗರದ ಮುಖಾಂತರ ಸವಳಂಗ ರಸ್ತೆಗೆ ಸಂಪರ್ಕ ಕಲ್ಪಿಸುವ ಜಾಗಗಳಲ್ಲಿ ತೀವ್ರ ರೀತಿಯ ಟ್ರಾಫಿಕ್ ಸಮಸ್ಯೆಗಳು ತಲೆದೋರಿವೆ. ಸಾರ್ವಜನಿಕರು ದಿನನಿತ್ಯ ಕೆಲಸಗಳಿಗೆ ಓಡಾಡುವುದು ಕಷ್ಟಕರವಾಗಿದೆ ಎಂದು ದೂರಿದರು.
ಶಿವಮೊಗ್ಗ – ಸವಳಂಗ ರಸ್ತೆಗೆ ಸೂಚಿಸಿರುವ ಮಾರ್ಗಗಳಲ್ಲಿ ಟ್ರಾಫಿಕ್ ದಟ್ಟಣೆ ಆಗದಂತೆ ಹಾಗೂ ಶಿವಮೊಗ್ಗ – ಸವಳಂಗ ರಸ್ತೆ ಮಾರ್ಗ ಅವಲಂಬಿಸಿದ್ದ ಸಾರ್ವಜನಿಕರಿಗೆ ಸಂಚಾರಕ್ಕೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಕೆ.ಚೇತನ್ ಆಗ್ರಹಿಸಿದ್ದಾರೆ.