ಶಿವಮೊಗ್ಗ: ಶಿವಮೊಗ್ಗ-ರಾಣೇಬೆನ್ನೂರು ರೈಲ್ವೆ ಯೋಜನೆಯಲ್ಲಿ ಶಿಕಾರಿಪುರ- ಮಾಸೂರು-ರಾಣೇಬೆನ್ನೂರು ರೈಲು ಮಾರ್ಗವು ಅವಾಸ್ತವಿಕ ಮತ್ತು ಅವೈಜ್ಞಾನಿಕ ಸಾಧುವಲ್ಲದ ಮಾರ್ಗದ ಯೋಜನೆಯಾಗಿರುವ ಈ ಮಾರ್ಗವನ್ನು ಬದಲಾಯಿಸಬೇಕೆಂದು ಇಂದು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಶಿಕಾರಿಪುರದ ಹೆಚ್.ಟಿ.ಬಳಿಗಾರ್ ಒತ್ತಾಯಿಸಿದರು.
ಪ್ರಸ್ತುತ ನಿಯೋಜಿತ ರೈಲ್ವೆ ಮಾರ್ಗದ ಪ್ರದೇಶದಲ್ಲಿ ಯಾವುದೇ ಬೃಹತ್ ಕೈಗಾರಿಕೆಯಾಗಲಿ ಅಥವಾ ಉದ್ಯಮಗಳಾಗಲಿ ಇರುವುದಿಲ್ಲ. ಉದ್ಯೋಗಕ್ಕೆ ಹೋಗಿ ಬರುವ ಮತ್ತು ಹೊಸದಾಗಿ ಉದ್ಯೋಗ ಸೃಷ್ಠಿಸುವ ಪಟ್ಟಣಗಳು ಇಲ್ಲ ಹಾಗೂ ಪಟ್ಟಣ ಸಂಪರ್ಕವು ಬರುವುದಿಲ್ಲ. ಆದಾಗಿಯೂ ರೈಲು ಸಂಚರಿಸುವ ಜನದಟ್ಟಣೆಯೂ ಇರುವುದಿಲ್ಲ. ಈ ರೈಲ್ವೆಯೋಜನೆ ಮಾರ್ಗ ನಿಷ್ಟ್ರಯೋಜಕ ಮತ್ತು ಅವೈಜ್ಞಾನಿಕ ರೈಲ್ವೆ ಯೋಜನೆ ಆಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಈ ಮಾರ್ಗವನ್ನು ಬದಲಾಯಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಶಿವಮೊಗ್ಗ-ಶಿಕಾರಿಪುರ-ಮಾಸೂರು-ರಾಣೇಬೆನ್ನೂರು ವರೆಗಿನ ಹೊಸ ರೈಲು ಮಾರ್ಗಕ್ಕಾಗಿ ಅವಶ್ಯಕವಿರುವ ಭೂ ಸ್ವಾಧೀನ ಕಾರ್ಯವನ್ನು 2ನೇ ಹಂತದಲ್ಲಿ ಆರಂಭವಾಗಿದ್ದು, ಇದನ್ನು ಕೂಡಲೇ ಕೈ ಬಿಡಬೇಕೆಂದು ಒತ್ತಾಯಿಸಲಾಗಿದೆ. ಶಿಕಾರಿಪುರದಿಂದ ರಾಣೇಬೆನ್ನೂರು ಮಾರ್ಗ ಮದ್ಯದಲ್ಲಿ ಬರುವ ಗ್ರಾಮಗಳಲ್ಲಿ ಫಲವತ್ತಾದ ರೈತರ ಜೀವನಾಡಿಯಾದ ಕೃಷಿ ಪ್ರದೇಶಗಳು ಮತ್ತು ಅಡಿಕೆ ತೋಟ ಒಳಗೊಂಡಿದ್ದು, ಇದನ್ನು ಭೂ ಸ್ವಾಧೀನಕ್ಕೆ ಪಡಿಸಿಕೊಳ್ಳಲು ಮುಂದಾಗಿರುವುದರಿಂದ ತಲತಲಾಂತರದಿಂದ ಕೃಷಿ ಅವಲಿಂಬಿತ ಕುಟುಂಬಗಳು ಬೀದಿ ಪಾಲಾಗುವುದು ನಿಶ್ಚಿತವಾಗಿದೆ.
ಈ ಎಲ್ಲಾ ಕಾರಣಗಳಿಂದ ಸೂಕ್ತವಾದ ಮಾರ್ಗವೆಂದರೆ ಶಿಕಾರಿಪುರ, ಉಡುಗಣಿ, ಶಿರಾಳಕೊಪ್ಪ, ಬಳ್ಳಿಗಾವಿ, ತಾಳಗುಂದ, ತೋಗರ್ಸಿ, ಆನವಟ್ಟಿ, ಕೋಟಿಪುರ, ಹಾನಗಲ್ಲ, ಬಂಕಾಪುರ, ಸವಣುರು ಮಾರ್ಗ ಸೂಕ್ತವಾಗಿದ್ದು, ಈ ಮಾರ್ಗದಿಂದ ಹುಬ್ಬಳ್ಳಿ, ಕಾರವಾರ, ಗೋವಾ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಸೇತುವೆಯಾಗಲಿರುವುದರಿಂದ ಉದ್ದೇಶಪೂರ್ವ ನಿಯೋಜಿತ ಮಾರ್ಗವನ್ನು ಕೈ ಬಿಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಶಿಕಾರಿಪುರ ತಾಲೂಕಿನ ವಿವಿಧ ಗ್ರಾಮದ ರೈತರಾದ ಡಿ.ಎಲ್.ನಾಗರಾಜ್, ಸಿದ್ದಪ್ಪ, ಪಾಂಡುರಂಗಪ್ಪ, ಮಹಮ್ಮದ್ ರಸೂಲ್, ಮೌನೇಶ್, ಶಿವಮೂರ್ತಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.