ಶಿವಮೊಗ್ಗ: ಹೊಸದುರ್ಗ ತಾಲೂಕಿನ ಸುಕ್ಷೇತ್ರ ಬ್ರಹ್ಮವಿದ್ಯಾನಗರದಲ್ಲಿರುವ ಭಗೀರಥ ಪೀಠ ಮಹಾಸಂಸ್ಥಾನದಲ್ಲಿ ಫೆ. 9 ಮತ್ತು 10 ರಂದು ಪರಮಪೂಜ್ಯ ಜಗದ್ಗುರು ಶ್ರೀ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ 23 ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಹಾಗೂ ಶ್ರೀ ಭಗೀರಥ ದೇವಸ್ಥಾನ ಲೋಕಾರ್ಪಣೆ, ಧಾರ್ಮಿಕ ಸಮಾರಂಭ ನಡೆಯಲಿದೆ.

ಜಿಲ್ಲಾ ಉಪ್ಪಾರ ಸಂಘದ ಆವರಣದಲ್ಲಿರುವ ಭಗೀರಥ ಉಪ್ಪಾರ ಸಮುದಾಯ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಗದ್ಗುರು ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರು, ಫೆ. 9 ರಂದು ಮಠಾಧೀಶ್ವರರ ಧರ್ಮಸಭೆ, ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 90 ರಷ್ಟು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ಇನ್ನಿತರ ಕಾರ್ಯಕ್ರಮಗಳು ಜರುಗಲಿದ್ದು, ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಶಾಸಕರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಫೆ. 10 ರಂದು ಬೆಳಗ್ಗೆ 9 ಗಂಟೆಯಿಂದ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಭಗೀರಥ ದೇವಸ್ಥಾನ ಲೋಕಾರ್ಪಣೆ, ಪಟ್ಟಾಭಿಷೇಕ ಮಹೋತ್ಸವ ಜರುಗಲಿದ್ದು, ನಂತರ ನಡೆಯುವ ಧಾರ್ಮಿಕ ಸಮಾಂರಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಹಾರದ ಉಪಮುಖ್ಯಮಂತ್ರಿ ರೇಣುದೇವಿ, ಕೇಂದ್ರ ಮತ್ತು ರಾಜ್ಯದ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಮತ್ತು ಸಮಾಜದ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಭಗೀರಥ ಶ್ರೀ ಹಾಗೂ ಭಗೀರಥ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವವರು ವಯಸ್ಸಿನ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಸೇರಿ ಅಗತ್ಯ ದಾಖಲೆ ನೀಡಬೇಕಿದೆ. ಹೆಚ್ಚಿನ ಮಾಹಿತಿಗಾಗಿ 96329 61074, 82176 59517 ಸಂಪರ್ಕಿಸಬಹುದು ಎಂದರು. ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಹೋರಾಟ ಮುಂದುವರೆಯಲಿದೆ ಎಂದ ಸ್ವಾಮೀಜಿ, ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಒತ್ತಾಯಿಸಿದರು.ಜಿಲ್ಲಾ ಉಪ್ಪಾರ ಸಂಘದ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ಮಾತನಾಡಿ, ಈ ಎರಡು ದಿನದ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 3 ಸಾವಿರ ಸಮಾಜಬಾಂಧವರು ಭಾಗವಹಿಸುವಂತೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಎಸ್.ಆರ್. ಸತ್ಯನಾರಾಯಣ, ಅಧ್ಯಕ್ಷ ಎಸ್.ಟಿ. ಹಾಲಪ್ಪ, ಉಪಾಧ್ಯಕ್ಷ ಬೊಮ್ಮನಕಟ್ಟೆ ಮಂಜುನಾಥ್, ಖಜಾಂಚಿ ನಾಗರಾಜ್ ಕಂಕಾರಿ, ಕುಂಸಿ ಮೋಹನ್, ರವಿಕುಮಾರ್, ನಂಜುಂಡೇಶ್ವರ, ಮೈಲಾರಪ್ಪ, ಮುರಳಿ, ರಾಜಶೇಖರ್, ಸಿದ್ದಪ್ಪ, ಹನುಮಂತಪ್ಪ ಇನ್ನಿತರರು ಉಪಸ್ಥಿತರಿದ್ದರು.  

ವರದಿ ಮಂಜುನಾಥ್ ಶೆಟ್ಟಿ…