ಶಿವಮೊಗ್ಗ: ನಿನ್ನೆ ಸಂಜೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಿಧಿಸಿರುವ ವಾರಾಂತ್ಯ ಕರ್ಫ್ಯೂ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಅಷ್ಟೊಂದು ಯಶಸ್ವಿ ಕಾಣಲಿಲ್ಲ.

ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ವಿರಳವಾಗಿತ್ತು. ಕೆಎಸ್ಆರ್ಟಿಸಿ ಬಸ್ ಗಳಿದ್ದರೂ ಕೂಡ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ಸರ್ಕಾರಿ ಕಚೇರಿಗಳಲ್ಲಿ ಎರಡನೇ ಶನಿವಾರದ ಕಾರಣದಿಂದ ಬಂದ್ ಆಗಿದ್ದವು. ಬ್ಯಾಂಕ್ ಗಳು ಕೂಡ ಮುಚ್ಚಿದ್ದವು.

ಆದರೆ, ಅಗತ್ಯ ವಸ್ತುಗಳಿಗೆ ಅವಕಾಶವಿದ್ದ ಕಾರಣ ಎಂದಿನಂತೆ ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲು, ತರಕಾರಿ, ಮಾಂಸದ ಅಂಗಡಿಗಳು ತೆರೆದಿದ್ದವು. ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಲ್ಪಿಸಲಾಗಿತ್ತು.  ಸ್ಮಾರ್ಟ್ ಸಿಟಿ ಕಾಮಗಾರಿಗಳು ಮುಂದುವರೆದಿದ್ದವು. ಆಟೋ, ಖಾಸಗಿ ಬಸ್ ಗಳ ಸಂಚಾರವಿದ್ದರೂ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆ ಇತ್ತು.

ಗೋಪಿ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳಲ್ಲಿ ಸಂಚರಿಸುವವರ ದಾಖಲೆ ಪರಿಶೀಲನೆ ನಡೆಸಿದರು. ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ನಿನ್ನೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 59 ಕ್ಕೆ ಏರಿಕೆಯಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 8 ಜನ ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

ಜಿಲ್ಲಾಡಳಿತ ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದು, ಎಲ್ಲಾ ತಾಲೂಕುಗಳಲ್ಲಿಯೂ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಜಿಲ್ಲಾ ಪ್ರವಾಸಿ ತಾಣಗಳು. ಪ್ರಮುಖ ದೇವಾಲಯಗಳು ಬಂದ್ ಆಗಿದ್ದವು. ಇಂದು, ನಾಳೆ ನಡೆಯಬೇಕಿದ್ದ ಜಾತ್ರೆ, ಸಂತೆ ರದ್ದು ಮಾಡಲಾಗಿದೆ.

ನಗರದಲ್ಲಿ ವೀಕೆಂಡ್ ಕರ್ಫ್ಯೂ ನಿಮಿತ್ತ ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರಕ್ಕೆ ಅನುಮತಿ ಇದ್ದರೂ, ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. 

ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಅನಾವಶ್ಯಕವಾಗಿ ಓಡಾಡುವವರಿಗೆ ಪರಿಶೀಲನೆ ನಡೆಸುತ್ತಿರುವುದು ಕಂಡು ಬಂದಿದೆ.

ವರದಿ ಮಂಜುನಾಥ್ ಶೆಟ್ಟಿ…