ಶಿವಮೊಗ್ಗ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ವಿಚಾರ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ, ಸಾಯಬೇಡ್ರಿ ಅಂತೀವಿ, ಇಲ್ಲ ನಾವು ಸಾಯೋರೇ ಅಂತಾ ಚಂಡಿ ಹಠ ಹಿಡಿದ್ರೆ ಏನು ಮಾಡೋಣ ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಪ್ರಾರ್ಥನೆ ಮಾಡ್ತೀನಿ. ನೀವು ಇಬ್ಬರೇ ಪಾದಯಾತ್ರೆ ಹೋಗ್ತೀವಿ ಅಂತೀರಾ. ನೀವು ಇಬ್ಬರೇ ಹೋಗಿ ಏಕೆ ಸಾಯ್ತೀರಿ.
ನೀವು ಇಬ್ಬರೇ ಹೋಗ್ತೀವಿ ಅಂದ್ರೆ ನಿಮ್ಮ ಕಾರ್ಯಕರ್ತರು ಬಿಡುವುದಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಹೋರಾಟ ಕೈ ಬಿಡಬೇಕು ಎಂದು ಸಲಹೆ ನೀಡಿದರು.
ಹತ್ತಿರದಲ್ಲಿ ತಾ.ಪಂ., ಜಿ.ಪಂ. ಅಸ್ಲೆಂಬಿ ಚುನಾವಣೆ ಇದೆ. ಇವರ ಎದುರಿಗೆ ಶೋ ಮಾಡಬೇಕು ಅಂತಾ ತುಂಬಾ ಜನ ಬರುತ್ತಾರೆ. ಸುಮ್ಮ ಸುಮ್ಮನೆ ನೀವು ಏಕೆ ಸಾಯ್ತೀರಾ, ಅವರನ್ನು ಏಕೆ ಸಾಯಿಸುತ್ತೀರಾ?
ನಾವು, ನೀವು ಒಟ್ಟಿಗೆ ಸಂತೋಷವಾಗಿ ಜೀವನ ಮಾಡೋಣ. ರಾಜಕಾರಣ ಮಾಡುವ ಸಲುವಾಗಿ ಹೋರಾಟ ಮಾಡಲೇ ಬೇಕು ಅಂತಾ ಹಠ ಹಿಡಿದರೇ ನನ್ನ ಅಭ್ಯಂತರ ಏನಿಲ್ಲ ಎಂದು ತಿರುಗೇಟು ನೀಡಿದರು.
ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಹೋರಾಟ ಮಾಡುವ ಅವಕಾಶ ಇದೆ. ರಾಜಕಾರಣಕೋಸ್ಕರ ಕಾಂಗ್ರೆಸ್ ನವರು ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯದ ಜನ ಯೋಚನೆ ಮಾಡ್ತಿದ್ದಾರೆ.
ಅಧಿಕಾರದಲ್ಲಿ ಇದ್ದಾಗ ಏಕೆ ಕಾಂಗ್ರೆಸ್ ನವರಿಗೆ ಕೃಷ್ಣ, ಕಾವೇರಿ, ಮೇಕೆದಾಟು ಏಕೆ ಎಲ್ಲಾ ಮರೆತು ಹೋಗಿತ್ತು ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಸಾಕಷ್ಟು ವರ್ಷ ಅಧಿಕಾರದಲ್ಲಿ ಇದ್ರಿ…
ರಾಜ್ಯದಲ್ಲಿ ಆಡಳಿತ ನಡೆಸಿದವರು ನೀವೇ…
ಆಗ ಏಕೆ ಕೃಷ್ಣ, ಕಾವೇರಿ, ಮೇಕೆದಾಟು ಹೋರಾಟ ಏಕೆ ಮಾಡಲಿಲ್ಲ? ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತಿದ್ದಾಗೆ ನಿಮಗೆ ಕೃಷ್ಣ, ಕಾವೇರಿ, ಮೇಕೆದಾಟು ಎಲ್ಲಾ ನೆನಪು ಆಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಹೋರಾಟ ಮಾಡಿ ನನ್ನ ಅಭ್ಯಂತರ ಇಲ್ಲ…
ದೇಶದಲ್ಲಿ ರಾಜ್ಯದಲ್ಲಿ ವಿರೋಧಪಕ್ಷ ಇರಬೇಕು…
ನೀವು ಹೋರಾಟ ಮಾಡ್ತಿರಬೇಕು, ನಾವು ಅಧಿಕಾರದಲ್ಲಿ ಇರಬೇಕು. ನೀವು ವಿರೋಧ ಪಕ್ಷದಲ್ಲಿ ಇರಬೇಕು. ಈ ಹೋರಾಟವನ್ನು ಕೋವಿಡ್ ಆದ ಮೇಲೆ ಮಾಡಿ, ನೀವು ಬದುಕಿ ಎಂದು ಹೇಳಿದರು.
ಇವತ್ತು ವಿರೋಧ ಪಕ್ಷವೇ ಇಲ್ಲದ ಹಾಗೆ ಆಗಿ ಹೋಗಿದೆ. ಅಧಿಕೃತವಾಗಿ ಕೇಂದ್ರದಲ್ಲಿ ವಿಪಕ್ಷ ಇಲ್ಲ. ರಾಜ್ಯದಲ್ಲಿ ನಾಳೆ ಚುನಾವಣೆ ಎದುರಾದರೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ವಿಪಕ್ಷದಲ್ಲಿ ಇರುವ ಪರಿಸ್ಥಿತಿ ಇಲ್ಲ ಎಂದು ವ್ಯಂಗ್ಯವಾಡಿದರು.
ಮೇಕೆದಾಟು ವಿಷಯದಲ್ಲಿ ನಮ್ಮ ಕಣ್ಣು ತೆರೆಸಿದ್ದೀರಾ. ಖಂಡಿತ ಕೇಂದ್ರದಿಂದ ಏನೇನು ಮಾಡಬೇಕು ಅದನ್ನು ಮಾಡುತ್ತೇವೆ. ಆದರೆ ಬದುಕಿದ್ದು ಹೋರಾಟ ಮಾಡಿ. ಇದರಿಂದ ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು.
ನೀವು ಬಿಗಿ ಮಾಡಿದ್ರೆ ಇಬ್ಬರು ಪಾದಯಾತ್ರೆ ಮಾಡ್ತೀವಿ ಅಂತೀರಾ, ನಾವೇಕೆ ಬಿಗಿ ಮಾಡಬೇಕು.
ನೀವು ಮುಖ್ಯಮಂತ್ರಿ ಆಗಿದ್ದವರು, ಸರ್ಕಾರ ನಡೆಸಿರುವವರು. ಆ ಸಂದರ್ಭದಲ್ಲಿ ಈ ರೀತಿ ನಡೆದಿತ್ತಾ? ಮುಖ್ಯಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿ, ಲಾಕ್ ಡೌನ್ ಇದ್ದಾಗ, ಕರ್ಪ್ಯೂ ಇದ್ದಾಗ ನೀವು ಏನೇನು ಮಾಡಿದ್ರಿ ನೆನಪಿದೆಯಾ ಎಂದು ಪ್ರಶ್ನಿಸಿದರು.
ನಿಮಗೆ ನೀವು ಜೈಲಿಗೆ ಬೇಕಾದ್ರೂ ಕಳುಹಿಸಿ, ನಾವು ಮಾಡೇ ಮಾಡುವವರು ಅಂದ್ರೆ, ಇಂತಹ ಪದಗಳನ್ನು ನಾವು ಬಹಳ ಕೇಳಿದ್ದೀವಿ ಇದು ಪೌರುಷದ ಮಾತುಗಳು. ಕೋವಿಡ್ ಸಂದರ್ಭದಲ್ಲಿ ಪೌರುಷದ ಮಾತು ಬೇಡ.ಕೋವಿಡ್ ಹೋದ ಮೇಲೆ ಪೌರುಷದ ಮಾತು ಹೇಳಿ ನಾವು ಬೇಡ ಅನ್ನುವುದಿಲ್ಲ ನನ್ನ ಮಾತು ಅವರಿಗೆ ಎಷ್ಟರಮಟ್ಟಿಗೆ ಹಿಡಿಸಿತ್ತೋ, ಬೇಜಾರು ಆಗುತ್ತದೋ ಗೊತ್ತಿಲ್ಲ. ಎಲ್ಲಾ ಹಿರಿಯರು ನಮ್ಮ ರಾಜ್ಯದ ಆಸ್ತಿ. ದೇವೇಗೌಡರು, ಯಡಿಯೂರಪ್ಪ, ಸಿದ್ದರಾಮಯ್ಯ ಇವರೆಲ್ಲಾ ನಮ್ಮ ರಾಜ್ಯದ ಆಸ್ತಿ. ಇವರು ಯಾರೂ ಕೂಡಾ ಜನರ ವಿರೋಧ ಮಾಡಿದವರು ಅಲ್ಲ. ಇವೆರೆಲ್ಲಾ ನಮ್ಮ ಆಸ್ತಿ, ನಮ್ಮ ರಾಜ್ಯದ ಆಸ್ತಿ ಕಳೆದುಕೊಳ್ಳಲು ಇಷ್ಟವಿಲ್ಲ. ಅದಕ್ಕೆ ಹೋರಾಟ ಕೈಬಿಡುವಂತೆ ಪ್ರಾರ್ಥನೆ ಮಾಡುತ್ತಿರುವುದಾಗಿ ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ನಿಮ್ಮ ಹೋರಾಟ ನಿಲ್ಲಿಸಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ.
ಚುನಾವಣೆ ಬರುವವರೆಗೂ ಹೋರಾಟ ಮಾಡ್ತೀವಿ. ಆಮೇಲೆ ಜನರಿಗೆ ಏನಾದ್ರೂ ಆಗಲಿ ಅಂತಾ ಮನೋಭಾವನೆ. ಜನರ ಬಗ್ಗೆ, ಮತದಾರರ ಬಗ್ಗೆ ನಿಮಗೆಷ್ಟು ಆಸಕ್ತಿ ಇದೆಯೋ, ನಮಗೆ ಅದಕ್ಕಿಂತ 10 ಪಟ್ಟು ಆಸಕ್ತಿ ಇದೆ ಹೀಗಾಗಿಯೇ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು.
ಸರ್ಕಾರ ಮೇಕೆದಾಟು ಯೋಜನೆಯನ್ನು ಮಾಡೇ ಮಾಡ್ತೀವಿ. ಅವರು ಹೋರಾಟ ಮಾಡಿದ್ರೆ ಅಷ್ಟೇ ಮಾಡ್ತೀವಿ ಅಂತಲ್ಲ. ನಾವು ಮೇಕೆದಾಟು ಯೋಜನೆಯನ್ನು ಜಾರಿಗೆ ತರುವವರೇ. ಸಂದರ್ಭದಲ್ಲಿ ಹೋರಾಟ ನಡೆಸುವುದು ಬೇಡ ಎಂದು ಸಚಿವ ಈಶ್ವರಪ್ಪ ಮನವಿ ಮಾಡಿದರು