ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ(ಸಿಮ್ಸ್) ಇಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಇವರು ಕೋವಿಡ್-19 ಮುನ್ನೆಚ್ಚರಿಕೆ(ಬೂಸ್ಟರ್)ಡೋಸ್ ಲಸಿಕಾಕರಣಕ್ಕೆ ಚಾಲನೆ ನೀಡಿದರು.

ಈ ವೇಳೆ ಅವರು ಮಾತನಾಡಿ, ಭಾರತ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಜ.10 ರಿಂದ ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ(ಕೋಮಾರ್ಬಿಡಿಟಿ) ಹೊಂದಿರುವ ಫಲಾನುಭವಿಗಳಿಗೆ ಕೋವಿಡ್ 19 ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತಿದ್ದು ಎಲ್ಲ ಅರ್ಹರು ಈ ಬೂಸ್ಟರ್ ಡೋಸ್ ಪಡೆಯಬೇಕೆಂದು ಕರೆ ನೀಡಿದರು.

ಆರ್‍ಸಿಹೆಚ್‍ಓ ಡಾ.ನಾಗರಾಜನಾಯ್ಕ ಕಾರ್ಯಕ್ರಮದ ನಂತರ ಮಾತನಾಡಿ, ಈಗಾಗಲೇ ಲಸಿಕೆ ಪಡೆದಿರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳು ಕೋವಿಡ್ ಪೋರ್ಟಲ್‍ನಲ್ಲಿ ನೊಂದಾಯಿಸಿದಂತೆ 2 ನೇ ಡೋಸ್ ಪಡೆದ 09 ತಿಂಗಳ(39 ವಾರಗಳು) ನಂತರ ಬೂಸ್ಟರ್ ಡೋಸ್ ಪಡೆಯಲು ಅರ್ಹರಿರುತ್ತಾರೆ.
ಈ ಫಲಾನುಭವಿಗಳು ಈ ಮುಂಚೆ ಮೊದಲ ಹಾಗೂ ಎರಡನೇ ಡೋಸ್ ಕೋವಿಶೀಲ್ಡ್ ಪಡೆದಿದ್ದಲ್ಲಿ ಈಗ ಬೂಸ್ಟರ್ ಡೋಸ್ ಕೂಡ ಕಡ್ಡಾಯವಾಗಿ ಕೋವಿಶೀಲ್ಡನ್ನೇ ಪಡೆಯತಕ್ಕದ್ದು. ಮುಂಚೆ ಕೋವ್ಯಾಕ್ಸಿನ್ ಪಡೆದಿದ್ದಲ್ಲಿ ಬೂಸ್ಟರ್ ಡೋಸ್ ಕೂಡ ಕಡ್ಡಾಯವಾಗಿ ಕೋವ್ಯಾಕ್ಸಿನ್ ತೆಗೆದುಕೊಳ್ಳಬೇಕು.
ಬೂಸ್ಟರ್ ಡೋಸ್‍ಗಾಗಿ ಯಾವುದೇ ಹೊಸ ಫಲಾನುಭವಿಗಳನ್ನು ಕೋವಿನ್ ಪೋರ್ಟಲ್‍ನಲ್ಲಿ ನೋಂದಾಯಿಸುವಂತಿಲ್ಲ. ಜಿಲ್ಲೆಯ ಎಲ್ಲ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕಾಕರಣ ನಡೆಸಲಾಗುತ್ತದೆ.

ಗುರಿ ಮತ್ತು ಫಲಾನುಭವಿಗಳ ವಿವರ : ಆರೋಗ್ಯ ಕಾರ್ಯಕರ್ತರಿಗೆ 23124 ಮತ್ತು ಮುಂಚೂಣಿ ಕಾರ್ಯಕರ್ತರಿಗೆ 18154 ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಆರೋಗ್ಯ ಕಾರ್ಯಕರ್ತೆಯರಿಗೆ 1ನೇ ಡೋಸ್ 23124, 2ನೇ ಡೋಸ್ 22573 ಲಸಿಕೆ ನೀಡಲಾಗಿದೆ. ಮುಂಚೂಣಿ ಕಾರ್ಯಕರ್ತೆಯರಿಗೆ 1ನೇ ಡೋಸ್ 18152, 2ನೇ ಡೋಸ್ 17822 ಲಸಿಕೆ ನೀಡಲಾಗಿದೆ. 18 ರಿಂದ 44 ವರ್ಷ ವಯಸ್ಸಿನ ನಾಗರೀಕರಿಗೆ 1ನೇ ಡೋಸ್ 690891, 2ನೇ ಡೋಸ್ 516566 ಲಸಿಕೆ ನೀಡಲಾಗಿದೆ. 45 ರಿಂದ 59 ವರ್ಷ ವಯಸ್ಸಿನ ನಾಗರಿಕರಿಗೆ 1ನೇ ಡೋಸ್ 310132, 2ನೇ ಡೋಸ್ 297041 ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರೀಕರಿಗೆ 1ನೇ ಡೋಸ್ 204831, 2ನೇ ಡೋಸ್ 179185 ಲಸಿಕೆ ನೀಡಲಾಗಿದೆ. ಮತ್ತು 15 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ 1ನೇ ಡೋಸ್ 44482 ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್, ಡಿ.ಎಸ್.ಅರುಣ್, ಮಹಾನಗರಪಾಲಿಕೆ ಮಹೌಪೌರರಾದ ಸುನೀತಾ ಅಣ್ಣಪ್ಪ, ಉಸ್ತುವಾರಿ ಸಚಿವರ ಧರ್ಮಪತ್ನಿ ಜಯಲಕ್ಷ್ಮಿ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ, ಇತರರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…