ಶಿವಮೊಗ್ಗ: ನಗರದ 27 ನೇ ವಾರ್ಡ್ ನ ಮಿಳಘಟ್ಟ ಕೆರೆ ಜಾಗದ ಪಕ್ಕದಲ್ಲಿ ಸಂತೆ ಮಾರುಕಟ್ಟೆ ಕಾಂಪ್ಲೆಕ್ಸ್ ನಿರ್ಮಾಣದ ಮುನ್ನ ಸ್ಥಳೀಯ ನಿವಾಸಿಗಳ ಅನುಕೂಲಕ್ಕೆ 30 ಅಡಿ ರಸ್ತೆ ನಿರ್ಮಿಸಲು ಕೋರಿ ಪಾಲಿಕೆ ಮಹಾಪೌರರಿಗೆ ಇಂದು ಜೆಡಿಎಸ್ ಕಾರ್ಮಿಕ ವಿಭಾಗದಿಂದ ಮನವಿ ಸಲ್ಲಿಸಲಾಯಿತು.
ಮಿಳಘಟ್ಟ ಕೆರೆ ಜಾಗದಲ್ಲಿ ಮಂಗಳವಾರದ ಸಂತೆ ಮೈದಾನದ ನಡೆಸಲು ಯೋಜಿಸಿದ್ದು, ಈ ಕೆರೆಯ ಜಾಗದಲ್ಲಿ ಸಂತೆಗಾಗಿ ಮೊದಲ ಹಂತದಲ್ಲಿ ಕಾಂಪ್ಲೆಕ್ಸ್ ನಿರ್ಮಿಸಲು ಈಗಾಗಲೇ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ಆರಂಭವಾಗುತ್ತಿದೆ. ಸದರಿ ಕೆರೆಯ ಜಾಗದ ಸುತ್ತಲೂ ಇರುವ ಒಂದು ಭಾಗದಲ್ಲಿ 60 ಕ್ಕಿಂತ ಹೆಚ್ಚಿನ ಮನೆಗಳಿದ್ದು, ಈ ಮನೆಗಳಲ್ಲಿ ಕಡುಬಡತನದಲ್ಲಿರುವ ಕೂಲಿಕಾರ್ಮಿಕರು ವಾಸವಾಗಿದ್ದಾರೆ.
ಕಳೆದ 40 ವರ್ಷಗಳಿಂದ ಇಲ್ಲಿ ಜೀವನ ನಡೆಸುತ್ತಿದ್ದು, ಇಲ್ಲಿ ಓಡಾಡಲು ಇದೇ ಕೆರೆ ಜಾಗ ಅವಲಂಬಿಸಿದ್ದಾರೆ ಎಂದರು.ಸದರಿ ಕೆರೆ ಜಾಗದಲ್ಲಿ ಕಾಂಪ್ಲೆಕ್ಸ್ ನಿರ್ಮಿಸಲು ಪಾಲಿಕೆ ನಿರ್ಧರಿಸಿದ್ದು, ಬಡವರ ಮನೆ ಬಾಗಿಲ ಮುಂದೆ 15 ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಲು ಮುಂದಾಗಿರುವುದು ಅಮಾನವೀಯ ಕೆಲಸವಾಗಿದ್ದು, ಸ್ಥಳೀಯರಿಗೆ ಓಡಾಡಲು ತೊಂದರೆಯಾಗಲಿದೆ ಎಂದುದ ದೂರಿದರು.ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆ ಇದ್ದು, ಜನ ವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ.
ಕೂಡಲೇ ಈ ಜನರಿಗೆ ಅನುಕೂಲವಾಗುವಂತೆ 30 ಅಡಿ ರಸ್ತೆಗೆ ಜಾಗ ಬಿಡಬೇಕು. ಪಾಲಿಕೆ ವತಿಯಿಂದ ರಸ್ತೆ ನಿರ್ಮಿಸಿ ಸ್ಥಳೀಯರಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಎಂದು ಜೆಡಿಎಸ್ ಕಾರ್ಮಿಕ ವಿಭಾಗ ಒತ್ತಾಯಿಸಿದೆ.ಒಂದು ವೇಳೆ ಮೂಲ ಸೌಕರ್ಯ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲೇ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಶಾಮು ಡಿ., ಪ್ರಮುಖರಾದ ನಾಗರಾಜ ಕಂಕಾರಿ, ಹೆಚ್. ಪಾಲಾಕ್ಷಿ, ನರಸಿಂಹ ಗಂಧದ ಮನೆ, ಪತ್ರಕರ್ತರಾದ ಶಿ.ಜು. ಪಾಶ, ವಿನಯ್ ಬಿ.ಎಸ್., ಭಾಸ್ಕರ್, ಪರಶುರಾಂ ಹಾಗೂ ಸ್ಥಳೀಯರು ಇದ್ದರು.