ಶಿವಮೊಗ್ಗ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸಲು ಜ.19 ರಂದು ಶಿವಮೊಗ್ಗ ಜಿಲ್ಲೆಯಿಂದ ಸುಮಾರು 2000 ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯೋಜನೆ ಜಾರಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು, ಜ.19ರಂದು ಬೆಳಿಗ್ಗೆ 8.30ಕ್ಕೆ ಶಿವಮೊಗ್ಗ ಜಿಲ್ಲೆಯವರು ಕೆಪಿಸಿಸಿ ಕಚೇರಿ ಬಳಿ ಹಾಜರಿರುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಬಹಿರಂಗ ಸಭೆ ನಡೆಯುವ ಸ್ಥಳದವರೆಗೆ ನಡೆಯುವ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದೇವೆ ಎಂದರು.

ಮೇಕೆದಾಟು ಯೋಜನೆಗೆ ಮೊದಲ ಬಾರಿಗೆ ಆಡಳಿತಾತ್ಮಕ ಮಂಜೂರಾತಿ ಕೊಟ್ಟಿದ್ದೇ ಅಂದಿನ ಕಾಂಗ್ರೆಸ್ ಸರ್ಕಾರ. ಆದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿದೆ. ಈ ಯೋಜನೆ ಜಾರಿಯಾದರೆ ಬೆಂಗಳೂರು ಸೇರಿದಂತೆ ಸುತ್ತಮುತ್ತಲ 10 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಲಿದೆ. ಸದರಿ ಯೋಜನೆಯಿಂದ 67.15 ಟಿಎಂಸಿ ನೀರು ಸಂಗ್ರಹಿಸಬಹುದಾಗಿದೆ ಹಾಗೂ 400 ಮೇಗವಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಬಹುದಾಗಿದೆ. ಮುಂದಿನ 50 ವರ್ಷದವರೆಗೆ ಈ 10 ಜಿಲ್ಲೆಗಳಿಗೆ ಕುಡಿಯವ ನೀರಿನ ಸಮಸ್ಯೆ ಇರುವುದಿಲ್ಲ ಎಂದರು.ಈ ಯೋಜನೆ ಜಾರಿ ವಿಳಂಬವಾಗುತ್ತಿರುವ ಬಗ್ಗೆ ಬಿಜೆಪಿ ಸುಳ್ಳು ಹೇಳುತ್ತಿದೆ. ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಸಹ ಈ ಯೋಜನೆ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.

ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕಳೆದ ವಾರ ಎರಡಂಕಿ ದಾಟದ ಸೋಂಕಿತ ಸಂಖ್ಯೆ ತಮಿಳುನಾಡಿನ ಮೇಲ್ಮರ ಮತ್ತೂರಿನ ಓಂಶಕ್ತಿ ದರ್ಶನ ಪಡೆದು ಶುಕ್ರವಾರ ರಾತ್ರಿ ಆಗಮಿಸಿದ ಯಾತ್ರಾರ್ಥಿಗಳಿಂದಲೇ ಕರೋನಾ ಹೆಚ್ಚಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಓಂಶಕ್ತಿ ದರ್ಶನ ಪಡೆಯಲು ವ್ಯವಸ್ಥೆ ಮಾಡಿದ್ದು, 82 ಬಸ್ಗ ಳಲ್ಲಿ ತೆರಳಿದ್ದ ಯಾತ್ರಾರ್ಥಿಗಳೆಲ್ಲಾರಿಗೂ ಕರೋನಾ ಟೆಸ್ಟ್ ಮಾಡಬೇಕು. ಅವರ ಮನೆಗೆ ಅಧಿಕಾರಿಗಳನ್ನು ಕಳುಹಿಸಿ ತಪಾಸಣೆ ನಡೆಸಬೇಕು. ಹಾಗೆಯೇ ಅವರೆಲ್ಲರಿಗೂ ಕ್ವಾಂರಟೈನ್ ವ್ಯವಸ್ಥೆ ಮಾಡಬೇಕೆಂದು ಕಾಂಗ್ರೆಸ್ ಪಕ್ಷದಿಂದ ಒತ್ತಾಯಿಸಲಾಗಿತ್ತು. ಆದರೆ ಕಟಾಚಾರಕ್ಕೆ ಕರೋನಾ ಟೆಸ್ಟ್ ಮಾಡಿ ಹಾಗೆಯೇ ಮನೆಗೆ ಕಳುಹಿಸಿದ್ದರಿಂದ ಕರೋನಾ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ದೂರಿದರು.

ಓಂಶಕ್ತಿ ದರ್ಶನ ಪಡೆದು ಕರೋನಾ ಸೋಂಕಿಗೊಳಗಾದವರಿಗೆ ಸಚಿವ ಈಶ್ವರಪ್ಪ ಅವರು 50000 ರೂ. ಪರಿಹಾರ ನೀಡಬೇಕು. ಸಚಿವರಿಗೂ ಸಹ ಕರೋನಾ ಟೆಸ್ಟ್ ಮಾಡುವುದು ಒಳ್ಳೆಯದು. ಸಚಿವ ಸ್ಥಾನದಿಂದ ಈಶ್ವರಪ್ಪ ಅವರನ್ನು ವಜಾಗೊಳಿಸುವಂತೆ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಅವಶ್ಯಕತೆ ಇಲ್ಲ ಎಂದರು.ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ ಆರೋಪದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ಸೇರಿದಂತೆ 31 ಜನರ ವಿರುದ್ಧ ಎಫ್ಐ ಆರ್ ದಾಖಲಾಗಿದೆ. ಹೊನ್ನಾಳಿಯ ಬಲಮುರಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಾಸಕ ರೇಣುಕಾಚಾರ್ಯ, ತೀರ್ಥಹಳ್ಳಿಯಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿ ಜಾತ್ರೆ ನಡೆಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಜಾತ್ರೆಯಲ್ಲಿ ಭಾಗವಹಿಸಿ ಉಲ್ಲಂಘಿಸಿರುವ ಶಾಸಕ ಸುಭಾಷ್ ಗುತ್ತೇದಾರ್ ವಿರುದ್ಧ ಎಫ್ಐಅಆರ್ ದಾಖಲಿಸಬೇಕೆಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆಯಲ್ಲಿ ಪಾರದರ್ಶಕ ಆಡಳಿತವಿದ್ದು, ಇಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಮೇಯರ್ ಅವರು ಹೇಳಿಕೆ ನೀಡಿದ್ದಾರೆ. ಆದರೆ, ಯಾವುದೇ ಕೆಲಸವಾಗಬೇಕಾದರೂ ಲಂಚ ನೀಡದೆ ಆಗುತ್ತಿಲ್ಲ. ಸ್ಮಾರ್ಟ್ಸಿುಟಿ ಕಾಮಗಾರಿ ಕಳಪೆಯಿಂದ ಕೂಡಿದ್ದು, ಒಂದು ವರ್ಷದವರೆಗೂ ಬಾಳಿಕೆ ಬರುವುದಿಲ್ಲ. ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಸ್ಮಾರ್ಟ್ಸಿದಟಿ ಕಾಮಗಾರಿ ಬಗ್ಗೆ ಪಾಲಿಕೆ ಸದಸ್ಯರಿಗೆ ಮಾಹಿತಿ ಸಿಗುತ್ತಿಲ್ಲ. ಶಾಸಕ ಈಶ್ವರಪ್ಪ ಅವರು ಹುಚ್ಚು ತನದಿಂದ ಮಾತನಾಡದೆ ಮತದಾರರ ಋಣ ತೀರಿಸಲು ಇನ್ನಾದರೂ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಕರೋನಾದಿಂದಾಗಿ ಪಕ್ಷದ ವತಿಯಿಂದ ಹೋರಾಟವನ್ನು ನಿಲ್ಲಿಸಿದ್ದು, ಮುಂದೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ಕರೋನಾ ನಿಯಂತ್ರಣಕ್ಕೆ ಪಕ್ಷದ ವತಿಯಿಂದ ಸಂಪೂರ್ಣ ಸಹಕಾರವಿದೆ. ರಾಜ್ಯದಲ್ಲಿ ಬಿಜೆಪಿಯ 2ವರೆ ವರ್ಷದ ಆಡಳಿತ ಸಾಧನೆ ಶೂನ್ಯವಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಹೋರಾಟ ಮಾಡುತ್ತಿದ್ದೇಯೆ ಹೊರತು ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ. ದೇಶದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ರೇಖಾ ರಂಗನಾಥ್, ಮೆಹಖ್ ಷರೀಫ್, ಮುಖಂಡರಾದ ಎಲ್.ರಾಮೇಗೌಡ, ವೈ.ಹೆಚ್.ನಾಗರಾಜ್, ಸಿ.ಎಸ್.ಚಂದ್ರಭೂಪಾಲ್, ಶಿವಲಿಂಗ ಮೂರ್ತಿ, ಚಂದ್ರಶೇಖರ್, ಎ.ಬಿ. ಮಾರ್ಟಿಸ್, ಸೌಗಂಧಿಕಾ ಇದ್ದರು. 

ವರದಿ ಮಂಜುನಾಥ್ ಶೆಟ್ಟಿ…