ಶಿವಮೊಗ್ಗ: ಸದ್ಯಕ್ಕೆ ಪಾದಯಾತ್ರೆ ಬೇಡ. ನಾವು ಅವತ್ತಿನಿಂದಲೂ ಪ್ರಾರ್ಥನೆ ಮಾಡ್ತಿದ್ದೀವಿ. ಕೋವಿಡ್ ಹೋದ ಮೇಲೆ ನೀವು ಮೇಕೆದಾಟಿನಲ್ಲಿ ಬಿದ್ದು ಒದ್ದಾಡಿ. ಯಾರೂ ಬೇಡ ಅಂದವರು. ಮಕ್ಕಳ ಮಧ್ಯ ನಿಂತುಕೊಂಡು ಡಿಕೆಶಿ ಪೋಸ್ ಕೊಡ್ತಾರೆ. ಏನು ಇವರು ಇಂಟರ್ ನ್ಯಾಷನಲ್ ಹೀರೋನಾ? ನಾಚಿಕೆ ಆಗಬೇಕಿತ್ತು. ಇವರಿಗೆ ಮಕ್ಕಳ ರಕ್ಷಣಾ ಆಯೋಗದವರು ನೋಟೀಸ್ ಕೊಡ್ತಿದ್ದಾರೆ.ಹೀಗೆಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸಿದವರು ಇದ್ದು, ಈ ರೀತಿ ಕೋವಿಡ್ ಸಂದರ್ಭದಲ್ಲಿ ಏನು ಬೇಕಾದ್ರೂ ಮಾಡಿಕೊಳ್ಳಿ. ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ ಅಂದ್ರೆ ಹೇಗೆ. ಮೇಕೆದಾಟು ಯೋಜನೆ ಆದಷ್ಟು ಬೇಗ ಜಾರಿಗೆ ತರಲು ಸರ್ಕಾರ ಏನು ಪ್ರಯತ್ನ ಮಾಡಬೇಕೋ ಅದನ್ನು ಮಾಡುತ್ತದೆ. ನ್ಯಾಯಾಲಯದ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ನಿಮ್ಮ ಪಕ್ಷದ ಕಾರ್ಯಕರ್ತರು ತುಂಬಾ ಜನ ಇದ್ದಾರೆ. ಮೊದಲನೇ ದಿನ ಇದ್ದವರು ಬಹಳ ಜನ, ಮೂರನೇ ದಿನಕ್ಕೆ ಇಲ್ಲ. ಹಾಗಾದರೆ ಎಲ್ಲಿ ಹೋದ್ರು ಅವರೆಲ್ಲಾ, ಅವರೆಲ್ಲಾ ಅವರವರ ಊರಿಗೆ ಹೋದ್ರು. ಊರಿಗೆ ಹೋಗಿ ಅಲ್ಲೆಲ್ಲಾ ಕೋವಿಡ್ ಹಚ್ಚುತ್ತಾರೆ. ಇವರು ರಾಜಕೀಯ ತೆವಲು ತೀರಿಸಿಕೊಳ್ಳಲು ಅವರವರ ಊರಿನವರು ಅನುಭವಿಸಬೇಕಾ. ಸದ್ಯಕ್ಕೆ ಮೇಕೆದಾಟು ಯೋಜನೆ ಪಾದಯಾತ್ರೆ ನಿಲ್ಲಿಸಿ ಎಂದು ಈಶ್ವರಪ್ಪ ಹೇಳಿದರು.
ಕೊರೋನಾ ನಿಯಮಾವಳಿ ಉಲ್ಲಂಘಿಸಿ ಬಿಜೆಪಿಯವರು ಕೊನೆ ಪಕ್ಷ ಕ್ಷಮೆನಾದ್ರೂ ಕೇಳಿದ್ದಾರೆ. ಆದರೆ, ಕಾಂಗ್ರೆಸ್ ನವರು ದಾದಾಗಿರಿ ಮಾಡುತ್ತಿದ್ದಾರೆ. ಕೊರೋನಾ ನಿಯಮಾವಳಿ ಉಲ್ಲಂಘಿಸಿದ ಶಾಸಕ ರೇಣುಕಾಚಾರ್ಯ ಮತ್ತು ಸುಬಾಷ್ ಗುತ್ತೆದಾರ ಪರ ಸಚಿವ ಈಶ್ವರಪ್ಪ ಬ್ಯಾಟ್ ಬೀಸಿದ್ದು, ನಮ್ಮ ಶಾಸಕರು ಸಹ ಕೋವಿಡ್ ಉಲ್ಲಂಘನೆ ಮಾಡಿದ್ದರೆ ಕೇಸ್ ಹಾಕಲಿ. ಆದರೆ, ಕಾಂಗ್ರೆಸ್ ನವರದ್ದು ಅದೇ ದಂಧೆ. ನಮ್ಮವರು ಕ್ಷಮೆನಾದ್ರೂ ಕೇಳಿದ್ರು, ಆದರೆ, ಅವರು ಅದನ್ನು ಮಾಡಿಲ್ಲ. ರೇಣುಕಾಚಾರ್ಯ ಅವರು ನಾನು ಮಾಡಿದ್ದು ತಪ್ಪು, ಯುವಕರು ಒತ್ತಾಯ ಮಾಡಿದ್ದಕ್ಕೆ ಹೋರಿ ಸ್ಪರ್ಧೆಗೆ ಹೋಗಿದ್ದೆ ಎಂದು ಕ್ಷಮೆ ಕೇಳುತ್ತೀನಿ ಎಂದ್ರು ತಿಳಿಸಿದ್ದಾರೆ ಎಂದರು.
ಆದರೆ, ಕಾಂಗ್ರೆಸ್ ನವರಿಗೆ ಕ್ಷಮೆ ಕೇಳುವ ಸೌಜನ್ಯ ಸಹ ಇಲ್ಲ. ಏನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ ಎಂದು ದಾದಾಗಿರಿ, ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಕೋವಿಡ್ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡುತ್ತಿದ್ದೇವೆ. ಆದರೆ, ಡಿಕೆಶಿ ಅವರು ಇದು ಸುಳ್ಳು ಅಂಕಿ ಅಂಶ ಅನ್ನುತ್ತಾರೆ. ಮುಂದೆ ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಕಾಣುತ್ತಿರುವ ವ್ಯಕ್ತಿ ಸರ್ಕಾರ ನೀಡುವ ಅಂಕಿ ಅಂಶ ಸುಳ್ಳು ಅನ್ನುತ್ತಾರೆ ಎಂದು ದೂರಿದರು.ಹಾಗಾದ್ರೆ, ನಿಮ್ಮ ಸರ್ಕಾರ ಇದ್ದಾಗ ನೀಡಿದ ಅಂಕಿ ಅಂಶಗಳು ಸುಳ್ಳಾ. ಸರ್ಕಾರ ಕೊಡುತ್ತಿರುವ ಅಂಕಿ ಅಂಶ ಸುಳ್ಳು ಅನ್ನುವುದಾದರೆ, ಸ್ವತಂತ್ರ ಬಂದು ಎಷ್ಟು ವರ್ಷ ಕಾಂಗ್ರೆಸ್ ಅಧಿಕಾರ ನಡೆಸಿದೆ. ನಾನು ಸರ್ಕಾರ ನಂಬಿರುವವನು. ಹಾಗಾಗಿ, ಅವರ ಸರ್ಕಾರ ಕೊಟ್ಟ ಅಂಕಿ ಅಂಶ ಸುಳ್ಳು ಅಂತಾ ಹೇಳಲ್ಲ ಎಂದು ಕಾಲೆಳೆದರು.ಸರ್ಕಾರದ ಅಂಕಿ ಅಂಶ ಸುಳ್ಳು ಎಂದು ಹೇಳಿದರೆ, ನೀವು ಜನರಿಗೆ ಮಾಡುತ್ತಿರುವ ಅಪಮಾನ, ಸರ್ಕಾರದ ಅಂಕಿ ಅಂಶ ಸುಳ್ಳು ಅಂತಾ ಹೇಳಿರುವ ಡಿಕೆಶಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಮೇಕೆದಾಟು ಪಾದಯಾತ್ರೆ ವಿಚಾರಲ್ಲಿ 30 ಮಂದಿ ವಿರುದ್ಧ ಕೇಸ್ ಹಾಕಿದ್ದಾರೆ. ಕೇಸ್ ಹಾಕೋದು ಬಹಳ ದೊಡ್ಡ ಕೆಲಸ ಅಲ್ಲ. ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ನಿಮ್ಮಂತಹ ನಾಯಕರ ಮೇಲೆ ಕೇಸ್ ಹಾಕಿಸುವ ಸಂದರ್ಭ ಬಂತಲ್ಲ ಅದೇ ನನಗೆ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.30 ಜನಕ್ಕೆ ಕೇಸ್ ಹಾಕಿರೋದು ನನಗೆ ತೃಪ್ತಿ ಇಲ್ಲ. ಕೇಸ್ ಹಾಕುವ ಉದ್ದೇಶ ನಮ್ಮದಲ್ಲ. ಭಂಡತನಕ್ಕೆ ಇನ್ನೇನು ಮಾಡೋಕೆ ಆಗುತ್ತದೆ. ಮುಖ್ಯಮಂತ್ರಿ ಆಗಿದ್ದವರ ಮೇಲೆ ಕೇಸ್ ಹಾಕ್ತಿದ್ದೀವಿ. ಕೇಂದ್ರದ ವಿರೋಧ ಪಕ್ಷದ ನಾಯಕರಾಗಿದ್ದವರ ಮೇಲೆ ಕೇಸ್ ಹಾಕ್ತಿದ್ದೀವಿ ಅಂದ್ರೆ ಜನಕ್ಕೆ ಇವರು ಏನು ಬುದ್ದಿವಾದ ಹೇಳ್ತಾರೆ. ಸರ್ಕಾರ ಮಾಡಿದ ಕಾನೂನು ಉಲ್ಲಂಘನೆ ಮಾಡಿ ಅಂತಾ ನೇರವಾಗಿ ಹೇಳಿದಾಗೆ ಇದು. ನೀವು ಹೋರಾಟ ಮಾಡಿ ನಮ್ಮ ಅಭ್ಯಂತರ ಇಲ್ಲ. ಆದರೆ ಕೋವಿಡ್ ಸಂದರ್ಭದಲ್ಲಿ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.