ಶಿವಮೊಗ್ಗ: ಕೊರೋನಾ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇ ದಿನೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಣಕ್ಕೆ ತರುವುದು ರಾಜ್ಯ ಸರ್ಕಾರಕ್ಕೂ ಒಂದು ಸವಾಲಾಗಿದೆ.
ಈ ಹಿನ್ನಲೆಯಲ್ಲಿ ರಾಜ್ಯದ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುವುದು. ಈ ಟಾಸ್ಕ್ ಫೋರ್ಸ್ ನಲ್ಲಿ ಗ್ರಾಮ ಪಂಚಾಯಿತಿ ಮತ್ತು ಇತರೆ ಸರ್ಕಾರಿ ಅಧಿಕಾರಿಗಳು ಇರುತ್ತಾರೆ. ಗ್ರಾಮೀಣ ಮಟ್ಟದಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ? ಯಾರಿಗೆ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಬೇಕು? ಯಾರನ್ನು ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಡಿಸಬೇಕು ಎಂಬುದನ್ನು ಆರೋಗ್ಯಾಧಿಕಾರಿಕಾರಿಗಳ ಜೊತೆ ಸೇರಿಕೊಂಡು ಚರ್ಚಿಸಿ ಸಮಿತಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ಇನ್ನೂ ಏಕೆ ಕಾಂಗ್ರೆಸ್ ನಾಯಕರನ್ನು ಎಫ್ಐಆರ್ ದಾಖಲಾದರೂ ಬಂಧಿಸಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ನ್ಯಾಯಾಲಯ ಕೂಡ ಈ ಬಗ್ಗೆ ನಿರ್ದೇಶನ ನೀಡಿದೆ.
ಆದರೆ, ಒಬ್ಬ ಮಾಜಿ ಮುಖ್ಯಮಂತ್ರಿಯನ್ನು ಬಂಧಿಸಿ ಜೈಲಿನಲ್ಲಿಡಲು ನಮಗೂ ಮನಸು ಬರುತ್ತಿಲ್ಲ ಕಾಂಗ್ರೆಸ್ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರತಿದಿನ ಸಾವಿರಾರು ಜನ ಪಾದಯಾತ್ರೆ ಮಾಡುತ್ತಿದ್ದಾರೆ. ಅದರಲ್ಲಿ ಎಷ್ಟು ಜನರಿಗೆ ಕೊರೋನಾ ಬಂದಿದೆಯೋ ಗೊತ್ತಿಲ್ಲ. ಈಗಾಗಲೇ ಕಾಂಗ್ರೆಸ್ ನಾಯಕರೇ ಆಗಿರುವ ಹೆಚ್.ಎಂ. ರೇವಣ್ಣ, ಶಿವಶಂಕರ್ ರೆಡ್ಡಿ, ಸಿ.ಎಂ. ಇಬ್ರಾಹಿಂ ಮೊದಲಾದ ಕಾಂಗ್ರೆಸ್ ನಾಯಕರಿಗೆ ಕೋವಿಡ್ ಬಂದಿದೆ. ಇದನ್ನು ಅರಿತು ಕಾಂಗ್ರೆಸ್ ನಾಯಕರು ನಡೆದುಕೊಳ್ಳಲಿ. ಕೋವಿಡ್ ಮುಗಿದ ನಂತರ ಯಾವ ಪಾದಯಾತ್ರೆಯನ್ನಾದರೂ ಅವರು ಮಾಡಲಿ ಬೇಡ ಎಂದವರು ಯಾರು ಎಂದರು.
ಜಿಲ್ಲೆಯಲ್ಲಿ ಕೆಲವು ಶಾಲೆಗಳಲ್ಲಿ ಮತ್ತು ಕಚೇರಿಗಳಲ್ಲಿ ಕೋವಿಡ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಆತಂಕದಲ್ಲಿದ್ದು, ಶಾಲೆಗಳನ್ನು ಬಂದ್ ಮಾಡಿ ಲಾಕ್ ಡೌನ್ ಏನಾದರೂ ಜಾರಿ ಮಾಡುವ ಸಂಭವವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಈಗಾಗಲೇ ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಪೂರ್ಣ ಅಧಿಕಾರ ನೀಡಿದ್ದೇವೆ. ಜಿಲ್ಲೆಯಲ್ಲಿ 60 ಮಕ್ಕಳಿಗೆ ಕೊರೋನಾ ಬಂದಿದೆ ಎಂಬ ಒಂದೇ ಕಾರಣಕ್ಕೆ ಎಲ್ಲಾ ಶಾಲೆಗಳನ್ನು ಬಂದ್ ಮಾಡುವುದು ಸರಿಯಲ್ಲ. ಈ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು. ಈಗ ಸದ್ಯಕ್ಕೆ ಲಾಕ್ ಡೌನ್ ಜಾರಿ ಮಾಡುವ ಪರಿಸ್ಥಿತಿ ಇಲ್ಲ. ಕೊರೋನಾ ಕೇಸ್ ಗಳು ಹೆಚ್ಚಾಗಿ ಪರಿಸ್ಥಿತಿ ಕೈಮೀರಿದರೆ ಲಾಕ್ ಡೌನ್ ಜಾರಿ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.