ಶಿವಮೊಗ್ಗ: ನಗರ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿ ಮತ್ತು ಮಹಾನಗರಪಾಲಿಕೆಯ ಆಸ್ತಿ ಕಬಳಿಕೆ ಒತ್ತುವರಿ ಆಗಿರುವುದನ್ನು ತೆರವುಗೊಳಿಸಿ ಆಸ್ತಿಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿಯಿಂದ ಇಂದು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ನಗರ ಮಹಾನಗರ ಪಾಲಿಕೆಯಾಗಿ ಅನೇಕ ವರ್ಷಗಳೇ ಕಳೆದರೂ, ನಗರದ ಜನಸಂಖ್ಯೆ, ವಿಸ್ತೀರ್ಣ ವ್ಯಾಪಕವಾಗಿ ಬೆಳೆಯುತ್ತಿದ್ದರೂ, ಜಿಲ್ಲಾಡಳಿತದ ನಿರ್ಲಕ್ಷದಿಂದಾಗಿ ದುರಾಡಳಿತ ಹೆಚ್ಚಾಗಿದೆ ಎಂದು ದೂರಲಾಗಿದೆ.ನಗರ ವ್ಯಾಪ್ತಿಯ ಕಂದಾಯ ಭೂಮಿ, ಮಹಾನಗರ ಪಾಲಿಕೆ ಆಸ್ತಿ ಕಬಳಿಕೆ ಒತ್ತುವರಿ ಆಗುತ್ತಿರುವುದು, ಅಲ್ಲದೆ ಅಧಿಕಾರಿಗಳ ನಿರ್ಲಕ್ಷದಿಂದ ನೂರಾರು ಕೋಟಿ ರೂಪಾಯಿಗಳ ಜಾಗ ಲಂಗು ಲಗಾಮಿಲ್ಲದೆ ಸಮುದಾಯಗಳಿಗೆ, ಮಠ-ಮಾನ್ಯಗಳಿಗೆ ಮನಸೋಇಚ್ಛೆ ಮಂಜೂರು ಮಾಡುತ್ತಿರುವುದನ್ನು ತಕ್ಷಣವೇ ಕೈಬಿಡಬೇಕು. ಸರ್ಕಾರದ ಆಸ್ತಿಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಲಾಗಿದೆ.
ಸಮುದಾಯಗಳಿಗೆ ಮಠ ಮಾನ್ಯಗಳಿಗೆ ಮನಸೋಇಚ್ಛೆ ಭೂಮಿ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು ಮುಂದಿನ ಮಕ್ಕಳ ಭವಿಷ್ಯಕ್ಕೆ ಸರ್ಕಾರದ ಜಾಗಗಳನ್ನು ಉಳಿಸಬೇಕು. ಪ್ರತಿ ವಾರ್ಡ್ ಗಳಲ್ಲಿ ಶೈಕ್ಷಣಿಕವಾಗಿ ಬಡವರು ಮಧ್ಯಮ ವರ್ಗದ ಮಕ್ಕಳಿಗೆ ಸರ್ಕಾರಿ ಶಾಲೆ, ಕಾಲೇಜುಗಳನ್ನು ಸ್ಥಾಪಿಸಲು ಜಾಗಗಳನ್ನು ಮೀಸಲಾಗಿಡಬೇಕು. ಪ್ರತಿ ವಾರ್ಡ್ ನಲ್ಲಿ ಯು ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವ ಮೂಲಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಜಾಗವನ್ನು ಮೀಸಲಾಗಿಡಬೇಕು ಎಂದು ಆಗ್ರಹಿಸಲಾಗಿದೆ.
ಮಕ್ಕಳಿಗೆ ದೈಹಿಕವಾಗಿ ಸದೃಢವಾಗಲು ಪ್ರತಿ ವಾರ್ಡ್ ನಲ್ಲಿಯೂ ಆಟದ ಮೈದಾನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಬೇಕು. ಇದರೊಂದಿಗೆ ಜಿಲ್ಲಾಡಳಿತಕ್ಕೆ ಮುಂದಿನ ಅಭಿವೃದ್ಧಿಗೆ ಜಾಗಗಳು ಅವಶ್ಯಕತೆ ಇರುವುದರಿಂದ ಅತ್ಯಂತ ಶೀಘ್ರವಾಗಿ ಸರ್ಕಾರದ ಎಲ್ಲ ಆಸ್ತಿಗಳನ್ನು ಭದ್ರತೆ ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಪ್ರಮುಖರಾದ ಡಾ. ಬಿ.ಎಂ. ಚಿಕ್ಕಸ್ವಾಮಿ, ಅಶೋಕ್ ಯಾದವ್ ಮೊದಲಾದವರಿದ್ದರು.