ಶಿವಮೊಗ್ಗ : ಸಾಹಿತ್ಯ ಸಾಂಸ್ಕೃತಿಕ ಸಂಘಟನಾತ್ಮಕ ವಾತಾವರಣವನ್ನು ಜಿಲ್ಲೆಯಾದ್ಯಂತ ನಿರ್ಮಾಣ ಮಾಡಲು ನಾವೆಲ್ಲರೂ ಕಂಕಣ ಬದ್ದರಾಗೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಹೇಳಿದರು.
ನಗರದ ಗೋಪಿಶೆಟ್ಟಿಕೊಪ್ಪದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲಾ ಕಸಾಪ ಪ್ರಥಮ ಕಾರ್ಯಕಾರಿ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಸ್ಥಗಿತಗೊಂಡ ತಾಲ್ಲೂಕು ಭವನಗಳ ಕಾಮಾಗಾರಿ ಪೂರ್ಣಗೊಳಿಸಲು ಅಗತ್ಯ ಪುನರ್ ಕ್ರಿಯಾ ಯೋಜನೆ ರೂಪಿಸಬೇಕಿದೆ. ಪ್ರತಿ ಕಸಾಪ ಸದಸ್ಯರಿಗೆ ಪ್ರತಿಯೊಂದು ಕಾರ್ಯಕ್ರಮದ ಆಮಂತ್ರಣ ತಲುಪಿಸಬೇಕಾಗಿದ್ದು, ಪತ್ರ ಬರಹ ಮತ್ತು ತಂತ್ರಜ್ಞಾನ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.
ದತ್ತಿ ದಾನಗಳ ಆಶಯಕ್ಕೆ ತಕ್ಕಂತೆ ಕಾರ್ಯಕ್ರಮ ರೂಪಿಸುವುದು ಹಾಗೂ ಕೆಳದಿ ಚೆನ್ನಮ್ಮ ಅವರ ಮುನ್ನೂರ ಐವತ್ತನೆ ವರ್ಷಾಚರಣೆ ಆಚರಿಸಲು ಈ ವೇಳೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕೋಶಧ್ಯಕ್ಷರಾದ ಎಂ.ನವೀನ್ ಕುಮಾರ, ಕಾರ್ಯದರ್ಶಿ ಎಂ.ಎಂ.ಸ್ವಾಮಿ, ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾದ ಮಹಾದೇವಿ, ಭದ್ರಾವತಿ ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ, ಶಿಕಾರಿಪುರ ಅಧ್ಯಕ್ಷರಾದ ಎಚ್.ಎಸ್.ರಘು, ಹೊಸನಗರ ಅಧ್ಯಕ್ಷರಾದ ತ.ಮ. ನರಸಿಂಹ, ಸೊರಬ ಅಧ್ಯಕ್ಷರಾದ ಶಿವಾನಂದ ಪಾಣಿ, ಸಾಗರ ಅಧ್ಯಕ್ಷರಾದ ವಿ.ಟಿ. ಸ್ವಾಮಿ, ಕಾನೂರು ಮಲ್ಲಿಕಾರ್ಜುನ್, ಡಿ.ಗಣೇಶ್, ಷಣ್ಮುಖಪ್ಪ, ಶೀಲಾ ಸುರೇಶ್, ಬಿ.ಟಿ.ಅಂಬಿಕ, ಅನುರಾಧ, ಕೇಶವಮೂರ್ತಿ, ಸೂರ್ಯಪ್ರಕಾಶ್, ಕುಬೇರಪ್ಪ, ನೃಪತುಂಗ ಉಪಸ್ಥಿತರಿದ್ದರು.