ಕೋವಿಡ್ ಹರಡದಂತೆ ತಡೆಯಲು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಕುರಿತು ವಿವಿಧ ಇಲಾಖಾ ಅಧಿಕಾರಿಗಳ ಹಾಗೂ ತಜ್ಞ ವೈದ್ಯರ ಸಭೆಯಲ್ಲಿ ಮಾತನಾಡಿದರು.

ಸರ್ಕಾರದ ಮಾರ್ಗಸೂಚಿ ಪ್ರಕಾರ ಶಾಲಾ ಕಾಲೇಜುಗಳನ್ನು ನಡೆಸಬೇಕು. ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ವಿದ್ಯಾ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಅವರ ಅನುಮತಿ ಪಡೆದ ಬಳಿಕ ರಜೆ ನೀಡಬಹುದಾಗಿದೆ. ಅನಾರೋಗ್ಯದಿಂದ ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಬಾರದು. ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ಸಚಿವರು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಲಸಿಕೆ ಪಡೆದವರ ಪ್ರಮಾಣ ರಾಜ್ಯಮಟ್ಟಕ್ಕೆ ಹೋಲಿಸಿದರೆ ಕಡಿಮೆಯಿದೆ. ಅಭಿಯಾನದ ರೀತಿಯಲ್ಲಿ ಲಸಿಕೆಯನ್ನು ಪ್ರತಿಯೊಬ್ಬರಿಗೂ ನೀಡಬೇಕು. ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮೂರನೇ ಡೋಸ್ ನೀಡುವ ಕಾರ್ಯವನ್ನು ಚುರುಕುಗೊಳಿಸಬೇಕು. ಜಿಲ್ಲೆಯಲ್ಲಿ ಪ್ರಸ್ತುತ ಪಾಸಿಟೀವ್ ವ್ಯಕ್ತಿಗಳ ಹೋಂ ಕ್ವಾರೆಂಟೈನ್ ಪ್ರಮಾಣ ಶೇ.೯೫ರಷ್ಟಿದ್ದು, ಪ್ರಾಥಮಿಕ ಸಂಪರ್ಕಿತರಿಗೆ ಕನಿಷ್ಟ ೩ದಿನ ಹೋಂ ಕ್ವಾರೆಂಟೈನ್ ಖಾತ್ರಿಪಡಿಸಬೇಕು. ಹೋಂ ಕ್ವಾರೆಂಟೈನ್‌ನಲ್ಲಿರುವವರಿಗೆ ಅಗತ್ಯ ಔಷಧಿಗಳನ್ನು ಒಳಗೊಂಡ ಕಿಟ್ ಕಡ್ಡಾಯವಾಗಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.

ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಕರೋನಾ ಪಾಸಿಟಿವ್ ಬಂದರೆ ಅಂತಹ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸದೆ, ವಸತಿ ನಿಲಯವನ್ನು ಸೀಲ್‌ಡೌನ್ ಮಾಡಿ ವಿದ್ಯಾರ್ಥಿಗಳನ್ನು ಅಲ್ಲಿಯೇ ಇರಿಸಿಕೊಳ್ಳಬೇಕು ಎಂದು ಹೇಳಿದರು.

ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಅವರು ಮಾತನಾಡಿ, ಮಕ್ಕಳಿಗೆ ಕರೋನಾ ಪಾಸಿಟಿವ್ ಬಂದರೆ ಗಾಬರಿಯಾಗುವ ಅಗತ್ಯವಿಲ್ಲ. ಮೂರನೆ ಅಲೆಯಲ್ಲಿ ಕರೋನಾ ವೈರಸ್ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಕರೋನಾ ಪಾಸಿಟಿವ್ ಬಂದ ಯಾವುದೇ ಮಕ್ಕಳು ಇದುವರೆಗೆ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬಿದ್ದಿಲ್ಲ. ಮಕ್ಕಳ ಮೂಲಕ ಕರೋನಾ ಹಿರಿಯರಿಗೆ ಹರಡಿದರೆ ಸಾಮುದಾಯಿಕ ಪ್ರತಿರೋಧ ಶಕ್ತಿ (ಹರ್ಡ್ ಇಮ್ಯೂನಿಟಿ) ಬಹು ಬೇಗನೇ ಬರಲು ಸಾಧ್ಯವಿದೆ. ಕರೋನಾ ನಿಯಂತ್ರಣದ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ ಕರೋನಾ ಪಾಸಿಟಿವ್ ಕಾರಣಕ್ಕಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡುವುದು ಸಮಂಜಸವಲ್ಲ. ಅಗತ್ಯ ಬಿದ್ದರೆ ಕರೋನಾ ಪಾಸಿಟಿವ್ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ತರಗತಿಗಳಿಗೆ ರಜೆ ನೀಡಬಹುದಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಪೊಲೀಸ್ ವರಿಷ್ಟಾಧಿಕಾರಿ ಡಾ.ಲಕ್ಷ್ಮೀಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಆರೋಗ್ಯಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಡಾ. ಸಿದ್ದನಗೌಡ ಡಾ. ಶ್ರೀಧರ್ ಡಾ.ಧನಂಜಯ ಸರ್ಜಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ತಜ್ಞ ವೈದ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…