ಶಿವಮೊಗ್ಗ: ಸಚಿವ ಸ್ಥಾನಕ್ಕಿಂತ ಪಕ್ಷ ಸಂಘಟನೆಯೇ ತಮಗೆ ಹೆಚ್ಚು ಪ್ರಿಯವಾದುದು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಎಲ್ಲವೂ ಶಿಸ್ತಿನಿಂದ ನಡೆಯುತ್ತದೆ. ಇಲ್ಲಿ ವರಿಷ್ಠರು ಹೇಳಿದ ಹಾಗೆ ನಾವು ಕೇಳಬೇಕು. ನಾವೆಲ್ಲಾ ಪಕ್ಷದ ನಿಷ್ಠಾವಂತ ಕೆಲಸಗಾರರು. ಸಚಿವ ಸ್ಥಾನ ಬಿಟ್ಟು ಪಕ್ಷದ ಸಂಘಟನೆಗೆ ಬನ್ನಿ ಎಂದರೆ ಹೋಗಬೇಕು. ಹಾಗಾಗಿ ಪಕ್ಷ ಹೇಳಿದ ಹಾಗೇ ನಾನು ಎಲ್ಲಾ ರೀತಿಯ ಕೆಲಸಕ್ಕೂ ಸಿದ್ಧ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಕರ್ನಾಟಕದಲ್ಲಿ ಖಾಲಿ ಇಲ್ಲ. ನಳಿನ್ ಕುಮಾರ್ ಕಟೀಲ್ ಅವರು ಅತ್ಯಂತ ಜವಾಬ್ದಾರಿಯಿಂದ ತಮ್ಮ ಸ್ಥಾನವನ್ನು ತುಂಬುತ್ತಿದ್ದಾರೆ. ಅವರು ರಾಜ್ಯಾಧ್ಯಕ್ಷರಾದ ಮೇಲೆ ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಚುನಾವಣೆಗಳನ್ನು ಬಿಜೆಪಿ ಗೆದ್ದಿದೆ. ಗ್ರಾಮ ಪಂಚಾಯಿತಿ, ವಿಧಾನಸಭೆ, ಮಹಾನಗರ ಪಾಲಿಕೆ ಹೀಗೆ ಹಲವು ಚುನಾವಣೆಗಳಲ್ಲಿ ನಾವು ಜಯಭೇರಿ ಬಾರಿಸಿದ್ದೇವೆ. 17 ಉಪ ಚುನಾವಣೆಗಳಲ್ಲಿ 15 ರಲ್ಲಿ ಗೆದ್ದಿದ್ದೇವೆ. ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಹೆಚ್ಚಿನ ಸ್ಥಾನ ಗಳಿಸಿದ್ದೇವೆ. ಹಾಗಾಗಿ ಕಟೀಲ್ ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ತನ್ನ ವೈಭವವನ್ನು ಮತ್ತೆ ಮರುಕಳಿಸಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ಸ್ಪಷ್ಟ ಬಹುಮತ ಪಡೆದು ಯಾರ ನೆರವೂ ಇಲ್ಲದೇ ಅಧಿಕಾರ ನಡೆಸುತ್ತೇವೆ. ಹಾಗೇಯೇ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಅತ್ಯಂತ ಹೆಚ್ಚಿನ ಬಹುಮತದಿಂದ ಗೆದ್ದು ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುತ್ತೇವೆ. ಈ ಬಗ್ಗೆ ಯಾವ ಸಂಶಯವೂ ಬೇಡ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ನೀಡುವುದರ ಬಗ್ಗೆ ಆಯಾ ಶಾಲೆಗಳಿಗೆ ಜವಾಬ್ದಾರಿ ನೀಡಲಾಗಿದೆ. ಕೆಲವು ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿರುವುದರಿಂದ ಆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಒಟ್ಟಾರೆ ಆಯಾ ಶಾಲೆಗಳು ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸುವಂತೆ ಸಚಿವರು ಮನವಿ ಮಾಡಿದರು.ಬಿಜೆಪಿ ಸರ್ಕಾರದ ಆಡಳಿತದ ಕೊನೆಯ ಭಾಗದಲ್ಲಿ ನಾವಿದ್ದೇವೆ. ಸುಮಾರು 4 ಸಚಿವ ಸ್ಥಾನಗಳು ಖಾಲಿ ಇವೆ. ಅವುಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕಿದೆ. ಸಾಮಾನ್ಯವಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಾಗಿರುತ್ತಾರೆ. ವರಿಷ್ಠರು ಈ ಬಗ್ಗೆ ತೀರ್ಮಾನ ತೆಗೆದುಕೊಂಡು ಸಚಿವ ಸಂಪುಟವನ್ನು ವಿಸ್ತರಿಸುತ್ತಾರೆ ಎಂದರು.

ವರದಿ ಮಂಜುನಾಥ್ ಶೆಟ್ಟಿ…