ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಅಗತ್ಯವಿಲ್ಲದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಆಡಳಿತ ನಡೆಸುವ ವ್ಯಕ್ತಿಗೆ ಯಾವ ಜಿಲ್ಲೆಯಾದರೇನು? ದೇವರ ಪಲ್ಲಕ್ಕಿ ಹೊರುವವರಿಗೆ ಹಿಂದಾದರೇನು? ಮುಂದಾದರೇನು? ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಆಡಳಿತ ವ್ಯವಸ್ಥೆ. ಜನತೆ ದೇವರಿದ್ದ ಹಾಗೇ. ಆ ಜಿಲ್ಲೆ ಬೇಕು, ಈ ಜಿಲ್ಲೆ ಬೇಕೆಂದು ಚರ್ಚೆಯಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇದಾಗಬಾರದಾಗಿತ್ತು. ಆದರೂ ಆಗುತ್ತಿದೆ. ಇಂದು ಅಥವಾ ನಾಳೆ ಈ ವಿಷಯ ತಿಳಿಯಾಗಲಿದೆ ಎಂದರು.
ನಾನು ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದೆ. ಈಗ ಚಿಕ್ಕಮಗಳೂರು ಉಸ್ತುವಾರಿ ವಹಿಸಲಾಗಿದೆ. ಬೇರೆ ಜಿಲ್ಲೆಯವರು ಇಲ್ಲಿನ ಉಸ್ತುವಾರಿಯಾಗಿ ಪರಿಸ್ಥಿತಿ ಅಧ್ಯಯನ ಮಾಡಿದಾಗ ಪಕ್ಷದ ಶಾಸಕರು ಜನರೊಂದಿಗೆ ಹೇಗಿದ್ದಾರೆ, ಅಭಿವೃದ್ಧಿ ಕೆಲಸ ಮಾಡಿದ್ದಾರೆಯೇ, ತಿದ್ದುಪಡಿ ಮಾಡಿಕೊಳ್ಳಬೇಕಿರುವುದೇನು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರಿಗೆ ತಿಳಿಸುತ್ತಾರೆ. ಮುಂದೆ ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ. ಈಗ ಪಕ್ಷ ಸಂಘಟನೆ ಮತ್ತು ಅಭಿವೃದ್ಧಿ ದೃಷ್ಠಿಯಿಂದ ಉಸ್ತುವಾರಿ ಬದಲಿಸಲಾಗಿದೆ ಎಂದು ತಿಳಿಸಿದರು.ನಾನು ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ ಸಚಿವನಾಗಿ ಅಲ್ಲಿ ಪಕ್ಷ ಸಂಘಟನೆ, ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದ್ದೇನೆ. ಶೃಂಗೇರಿ ಹೊರತಾಗಿ ಅಲ್ಲಿ ಉಳಿದೆಲ್ಲಾ ಕಡೆ ಬಿಜೆಪಿ ಶಾಸಕರಿದ್ದಾರೆ. ಅಲ್ಲಿಯೂ ಪಕ್ಷ ಸಂಘಟನೆ ಮಾಡುತ್ತೇವೆ. ಶಾಸಕರು ಸರಿಯಾಗಿ ಕೆಲಸ ಮಾಡಿಲ್ಲದಿದ್ದರೆ ಜನ ಹೇಳುತ್ತಾರೆ. ಮುಂದೆ ನಾವು ತಿದ್ದಿಕೊಳ್ಳಬೇಕಿದ್ದರೆ ತಿದ್ದಿಕೊಂಡು ಅಭಿವೃದ್ಧಿ ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.
ನಾಲ್ಕು ಸಚಿವ ಸ್ಥಾನ ಖಾಲಿ ಇದೆ. ಮಂತ್ರಿ ಸ್ಥಾನ ಕೇಳುವುದು ತಪ್ಪಲ್ಲ. ಕೆಲವರು ಸಚಿವ ಸ್ಥಾನ ಕೇಳುತ್ತಾರೆ. ಮತ್ತೆ ಕೆಲವರು ಪಕ್ಷ ಸಂಘಟನೆ ಬಯಸುತ್ತಾರೆ. ನನಗೆ ಮಂತ್ರಿ ಸ್ಥಾನ ಕೊಡಿ ಎಂದು ಕೇಳುವುದು ತಪ್ಪೇನಲ್ಲ ಎಂದು ಹೇಳಿದರು.ಕೇಂದ್ರ ನಾಯಕರಿಗೆ ಇದೇ ರೀತಿ ಮಾಡಿ ಎಂದು ಹೇಳಲು ಆಗುತ್ತಾ? ಅವರು ತೀರ್ಮಾನಿಸಿದಂತೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಕೇಂದ್ರ ನಾಯಕರಿಗಿಂತ ಇಲ್ಲಿನ ಶಾಸಕರು ದೊಡ್ಡವರಲ್ಲ. ಕೇಂದ್ರದ ನಾಯಕರು ತೀರ್ಮಾನಿಸಿದಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.ಕಾಂಗ್ರೆಸ್ ನಿಂದ ಬಂದವರು ಮತ್ತೆ ವಾಪಸ್ ಹೋಗುತ್ತಾರೆ ಎನ್ನುವುದು ಶಾಸಕ ಯತ್ನಾಳ್ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಬೇರೆ ಪಕ್ಷದಿಂದ ಬಂದ ಶಾಸಕರು ಆ ರೀತಿ ಹೇಳಿಲ್ಲ. ನಾಲ್ಕೈದು ಶಾಸಕರು ಒಟ್ಟಿಗೆ ಸೇರಿದ್ದಕ್ಕೆ ಅಪಾರ್ಥ ಕಲ್ಪಸಿಬೇಕಿಲ್ಲ. ಒಟ್ಟಿಗೆ ಸೇರಿ ಊಟ ಮಾಡಿದ್ದು, ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿರಬಹುದು. ನೆಗೆಟಿವ್ ಚಿಂತನೆ ಯಾಕೆ ಮಾಡಬೇಕು. ಕೆಟ್ಟದರ ಬಗ್ಗೆ ಯಾಕೆ ಯೋಚಿಸಬೇಕು. ಒಳ್ಳೆಯದಕ್ಕೂ ಅವರು ಸೇರಿರಬಹುದು ಎಂದರು.
ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೇಳಿದ್ದು, ಅವರಿಗೆ ನಾಳೆ ಚಿಕ್ಕಮಗಳೂರಿನಲ್ಲಿ ಉತ್ತರ ಕೊಡುತ್ತೇನೆ ಎಂದ ಅವರು, ಸಿಎಂ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆರ್. ಅಶೋಕ್, ಮಾಧುಸ್ವಾಮಿ ಕೂಡ ಒಪ್ಪಿಕೊಂಡಿದ್ದಾರೆ. ಸಂಪುಟ ವಿಸ್ತರಣೆ ವಿಳಂಬದಿಂದ ತೊಂದರೆಯಾಗಿಲ್ಲ. ಬಿಜೆಪಿಗೆ ಆರಂಭದಲ್ಲೇ ಪೂರ್ಣ ಬಹುಮತ ಬಂದಿದ್ದರೆ ಈ ರೀತಿ ಸಮಸ್ಯೆಯಾಗುತ್ತಿರಲಿಲ್ಲ. ಸಣ್ಣ ಪುಟ್ಟ ಗೊಂದಲಗಳಿದ್ದು, ಅದನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ ಎಂದರು.ಸರ್ಕಾರ ಸಾಲ ಮಾಡುತ್ತದೆ, ಸಾಲ ತೀರಿಸುತ್ತದೆ. ಹಣಕಾಸು ಸಚಿವರಾಗಿದ್ದ ಸಿದ್ಧರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಅವರು ಸಿಎಂ ಆಗಿದ್ದಾಗ ಒಂದು ರೂಪಾಯಿ ಸಾಲ ಮಾಡಿಲ್ಲವೆಂದು ಒಪ್ಪಿಕೊಳ್ಳಲಿ. ಅವರು ಸಾಲ ಮಾಡದಿದ್ದರೆ ಯಾಕೆ ಸೋಲಬೇಕಿತ್ತು. ಸರ್ಕಾರ ಯಾಕೆ ಕಳೆದುಕೊಳ್ಳಬೇಕಿತ್ತು ಎಂದು ಪ್ರಶ್ನಿಸಿದರಲ್ಲದೇ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ನಂತರ ಸಿದ್ಧರಾಮಯ್ಯ ಪಾಠ ಹೇಳಲು ಶುರು ಮಾಡಿದ್ದಾರೆ.
ಅವರು ಸೋತರೂ ಪಾಠ ಕಲಿತಿಲ್ಲ. ನಮಗೆ ಪಾಠ ಹೇಳುತ್ತಾರೆ. ನಾವು ತಪ್ಪು ಮಾಡಿದ್ರೆ ಹೋರಾಟ ಮಾಡಿ ತಿಳಿಸಲಿ. ಒಪ್ಪಿಕೊಂಡು ತಪ್ಪು ತಿದ್ದಿಕೊಳ್ಳುತ್ತೇವೆ ಎಂದರು.ಕೋವಿಡ್ ನಲ್ಲಿ ಪಾದಯಾತ್ರೆ ಮಾಡಲು ಹೋಗಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಸೇರಿದಂತೆ ಹಲವು ನಾಯಕರಿಗೆ ಕೊರೋನಾ ಬಂದಿದೆ. ಪಾದಯಾತ್ರೆ ಬೇಡ, ಆರೋಗ್ಯವಾಗಿರಿ ಎಂದು ಹೇಳಿದರೂ ಕೇಳದೇ ಪಾದಯಾತ್ರೆ ಮಾಡಿ ರಾಜ್ಯದಲ್ಲಿ ಕೊರೋನಾ ಹೆಚ್ಚಾಗಲು ಅವರೂ ಕಾರಣರಾದರು ಎಂದು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಈಶ್ವರಪ್ಪ ಟೀಕಿಸಿದರು.ಈಗ ಮಹಾದಾಯಿ ಬಗ್ಗೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ನಾನು ನೀರಾವರಿ ಸಚಿವನಾಗಿದ್ದಾಗ ಮಹದಾಯಿ ಯೋಜನೆಗಾಗಿ ಕ್ರಮ ಕೈಗೊಂಡಿದ್ದೆ. ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಸೋನಿಯಾ ಗಾಂಧಿ ಭೇಟಿ ಮಾಡಿ ಬಂದ ಬಳಿಕ ಕರ್ನಾಟಕದ ಪರವಾಗಿ ಸೋನಿಯಾ ಗಾಂಧಿ ಇದ್ದಾರೆ ಎಂದು ಹೇಳಿದ್ದರು. ಅದಾಗಿ ನಾಲ್ಕು ದಿನಗಳಲ್ಲಿ ಗೋವಾ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಸೋನಿಯಾ ಗಾಂಧಿ ಅವರು ಒಂದು ಹನಿ ಮಹದಾಯಿ ನೀರನ್ನು ಕರ್ನಾಟಕಕ್ಕೆ ಬಿಡಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಕಾಂಗ್ರೆಸ್ ನವರು ಈಗ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ರಾಜ್ಯದ ಜನರಿಗೆ ದ್ರೋಹ ಮಾಡಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಲಿ. ಕ್ಷಮೆಯಾಚಿಸಿದ ನಂತರ ಪಾದಯಾತ್ರೆ ಶುರು ಮಾಡಲಿ. ನಾವು ಮೇಕೆದಾಟು, ಮಹದಾಯಿ ಯೋಜನೆ ವಿಚಾರವಾಗಿ ಪ್ರಾಧಿಕಾರದ ತೀರ್ಮಾನಕ್ಕೆ ಬದ್ಧವಾಗಿದ್ದೇವೆ. ಅವರಂತೆ ಡ್ರಾಮಾ ಮಾಡ್ತಿಲ್ಲ ಎಂದು ಈಶ್ವರಪ್ಪ ಹೇಳಿದರು.