ಶಿವಮೊಗ್ಗ: ಕಳೆದ ಸಾಲಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಅವರು ಇಂದು ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಬೀಟ್ ವ್ಯವಸ್ಥೆ ಬಲಪಡಿಸಲಾಗಿದೆ. ಜಾನುವಾರು ಸಾಗಾಣಿಕೆ ಬಹಳಷ್ಟು ನಿಂತಿದೆ. ಗಾಂಜಾ ಮತ್ತು ಡ್ರಗ್ಸ್ ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಭದ್ರಾವತಿ ಮತ್ತು ತುಂಗಾ ನಗರ ಠಾಣೆಗಳ ವ್ಯಾಪ್ತಿಯಲ್ಲಿ ಅಧಿಕ ಪ್ರಮಾಣದಲ್ಲಿ ಗಾಂಜಾ ವಶಪಡಿಸಿಕೊಳ್ಳುವುದರ ಜೊತೆಗೆ ಗಾಂಜಾ ಸೇವನೆ ಮಾಡುವವರನ್ನು ಕೂಡ ಆರೋಗ್ಯ ತಪಾಸಣೆ ನಡೆಸಿ ಜೈಲಿಗೆ ಕಳಿಸಿದ್ದು, ಗಾಂಜಾ ಸೇವನೆ ಪ್ರಮಾಣ ಕಡಿಮೆಯಾಗಿದೆ ಎಂದರು.

ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿದ್ದ ಗಾಂಜಾ ಪೂರೈಕೆ ಜಾಲವನ್ನು ಬಂದ್ ಮಾಡಲಾಗಿದೆ. ಮರಳು, ಕಲ್ಲು ಮತ್ತು ರಿಯಲ್ ಎಸ್ಟೇಟ್ ಮಾಫಿಯಾದೊಂದಿಗೆ ಕೈ ಜೋಡಿಸುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಒಟ್ಟಾರೆಯಾಗಿ ಬೇರೆ ಜಿಲ್ಲೆಗಳಿಗೆ ಹೋಲಿಸಿದಾಗ, ನಮ್ಮ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆ ಮತ್ತು ನಿಯಂತ್ರಣ ಕ್ರಮಗಳು ಸಮಾಧಾನಕರವಾಗಿದೆ ಎಂದರು.ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಿದ ನಂತರ ಬೇಕಾಗುವಷ್ಟು ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ 105 ಕಾನ್ ಸ್ಟೇಬಲ್ ಹುದ್ದೆ, 32 ಸಬ್ ಇನ್ಸ್ ಪೆಕ್ಟರ್ ಹುದ್ದೆ ಖಾಲಿ ಇದೆ. 545 ಸಬ್ ಇನ್ಸ್ ಪೆಕ್ಟರ್ ಗಳು ಪರೀಕ್ಷೆಯಲ್ಲಿ ಪಾಸಾಗಿ ತರಬೇತಿ ಪಡೆಯುತ್ತಿದ್ದಾರೆ.

4 ಸಾವಿರ ಕಾನ್ ಸ್ಟೇಬಲ್ ಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, 8 ತಿಂಗಳ ತರಬೇತಿ ನಂತರ ಇಲಾಖೆಗೆ ಸೇರಲಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಪೊಲೀಸರಿಗೆ ಸುಸಜ್ಜಿತ ಮನೆಗಳು ಮಂಜೂರಾಗಿವೆ. ರಾಜ್ಯದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 100 ಪೊಲೀಸ್ ಠಾಣೆ ಕಟ್ಟಡಗಳ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶಿವಮೊಗ್ಗದಲ್ಲಿ ಸಂಚಾರ ಪೂರ್ವ ಠಾಣೆ, ಭದ್ರಾವತಿ ಗ್ರಾಮಾಂತರ ಠಾಣೆ ಮತ್ತು ತೀರ್ಥಹಳ್ಳಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಆಗಿದೆ ಎಂದರು.ಸಬ್ ಇನ್ಸ್ ಪೆಕ್ಟರ್ ಹುದ್ದೆ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ನಿರಾಧಾರ. ಯಾರಿಗಾದರೂ ಸಂಶಯವಿದ್ದರೆ ಅಂತಹ ಅಭ್ಯರ್ಥಿಗಳು ಸೂಕ್ತ ಫೀಸ್ ಕಟ್ಟಿ ಎಕ್ಸಾಂ ಶೀಟ್ ನಕಲನ್ನು ಪಡೆದು ಅಪೀಲ್ ಮಾಡಬಹುದು. ಕಲಬುರಗಿಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದವರನ್ನು ಜೈಲಿಗೆ ಕಳಿಸಲಾಗಿದೆ. ಒಂದು ಲಕ್ಷ ಅಭ್ಯರ್ಥಿಗಳು ಪಿಎಸ್ಐ ಪರೀಕ್ಷೆ ಬರೆದರು.

ಆದರೆ ಆಯ್ಕೆಯಾಗಿದ್ದು ಕೇವಲ 450 ಮಾತ್ರ. ಆದ್ದರಿಂದ ಉಳಿದವರಿಗೆ ಅಸಹನೆ ಇರುವುದು ಸಹಜ. ಆದರೂ ಅನ್ಯಾಯವಾಗಿದ್ದರೆ ದೂರು ನೀಡಿದ್ದಲ್ಲಿ ವಿಚಾರಣೆ ಮಾಡಿ ನ್ಯಾಯ ಕೊಡಿಸಲಾಗುವುದು ಎಂದರು.ಬಡ್ಡಿ ಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಮಾಯಕರಿಗೆ ಸಾಲ, ಬಡ್ಡಿ ವಸೂಲಾತಿಗೆ ಹಿಂಸೆ ನೀಡಿದಲ್ಲಿ ಅಂತಹವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು. ಜಿಲ್ಲಾ ಉಸ್ತುವಾರಿ ಬದಲಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನಗೆ ಚಿಕ್ಕಮಗಳೂರು ಜಿಲ್ಲೆ ಬಗ್ಗೆ ಆಸಕ್ತಿ ಇತ್ತು. ಆದರೆ, ತುಮಕೂರು ಜಿಲ್ಲೆ ಉಸ್ತುವಾರಿ ನೀಡಿದ್ದಾರೆ. ಬಯಲು ಸೀಮೆ ಜಿಲ್ಲೆಯಲ್ಲಿ ಕೆಲಸ ಮಾಡಲು ತೊಂದರೆ ಇಲ್ಲ. ಮುಖ್ಯಮಂತ್ರಿಗಳಿಗೆ ನನ್ನ ಬಗ್ಗೆ ಹೆಚ್ಚಿನ ವಿಶ್ವಾಸವಿದೆ ಎಂದರು.ಪಕ್ಷಾಂತರದ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಬಿಟ್ಟು ಹೋಗುವವರಿಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ ಎಂದರು.ಈ ಸಂದರ್ಭದಲ್ಲಿ ಕರ್ತವ್ಯಪರತೆ ಮೆರೆದ ಪೊಲೀಸ್ ತಂಡಗಳಿಗೆ ಅವಾರ್ಡ್ ನೀಡಲಾಯಿತು. ಪೂರ್ವ ವಲಯ ಉಸ್ತುವಾರಿ ಐಜಿ ಸತೀಶ್ ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವಿಕ್ರಂ ಆಮ್ಟೆ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…