ಶಿವಮೊಗ್ಗ: ನಗರದಲ್ಲಿ ಅಭಿವೃದ್ಧಿ ಪಡಿಸಿದ ಕನ್ಸರ್ ವೆನ್ಸಿಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ನೆಲೆ ಕಲ್ಪಿಸಲು ಚಿಂತಿಸಲಾಗಿದ್ದು, ಈ ನಿಟ್ಟಿನಲ್ಲಿ ನಗರದಲ್ಲಿರುವ ಕನ್ಸರ್ ವೆನ್ಸಿಗಳನ್ನು ಮೇಯರ್ ಸುನಿತಾ ಅಣ್ಣಪ್ಪ ಮತ್ತು ಆಯುಕ್ತ ಚಿದಾನಂದ ವಠಾರೆ ಹಾಗೂ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ವ್ಯಾಪಾರಕ್ಕೆ ಯೋಗ್ಯವಾದ ಸ್ಥಳ ಮತ್ತು ವಾಹನ ನಿಲುಗಡೆಗೆ ಯೋಗ್ಯವಾದ ಸ್ಥಳಗಳನ್ನು ಗುರುತಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಈಗಾಗಲೇ ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರು ನಗರದ ಪ್ರಮುಖ ರಸ್ತೆಯಲ್ಲಿ ಅಭಿವೃದ್ಧಿಪಡಿಸಿದ ಫುಟ್ ಪಾತ್ ಗಳ ಮೇಲೆ ತಮ್ಮ ವ್ಯಾಪಾರ ಮಾಡುತ್ತಿದ್ದರು. ಮೆಗ್ಗಾನ್ ಆಸ್ಪತ್ರೆ ಹಾಗೂ ಸುತ್ತಮುತ್ತಲೂ ತಿಂಡಿ ಕ್ಯಾಂಟೀನ್ ಗಳು ತಲೆ ಎತ್ತಿದ್ದವು. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು.
ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳು ಅವರನ್ನು ತೆರವುಗೊಳಿಸುವ ಕಾರ್ಯ ಕೂಡ ಕೈಗೊಂಡಿದ್ದರು.ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಹಿತರಕ್ಷಣಾ ಸಮಿತಿ ವ್ಯಾಪಾರಸ್ಥರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿತ್ತು. ಅವರ ಜೀವನೋಪಾಯಕ್ಕೆ ತೊಂದರೆಯಾಗದ ರೀತಿಯಲ್ಲಿ ಹಂತ ಹಂತವಾಗಿ ಅವರ ಮನವೊಲಿಸಿ ಅಭಿವೃದ್ಧಿಪಡಿಸಿದ ಕನ್ಸರ್ ವೆನ್ಸಿಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಮೇಯರ್ ಸುನಿತಾ ಅಣ್ಣಪ್ಪ ತಿಳಿಸಿದರು.ಪಾದಾಚಾರಿ ಮಾರ್ಗ ಅತಿಕ್ರಮಣ ತೆರವುಗೊಳಿಸಲಾಗುವುದು, ಎಲ್ಲಿ ಅವಕಾಶವಿದೆಯೋ ಅಂತಹ ಜಾಗಗಳ ಪಟ್ಟಿ ಮಾಡಿ ತಿಂಡಿ ಗಾಡಿಗಳಿಗೆ ಮತ್ತು ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸಲಾಗುವುದು. ಬಹು ಅಂತಸ್ತಿನ ಕಟ್ಟಡಗಳ ಮಾಲೀಕರು ಪಾರ್ಕಿಂಗ್ ಗೆ ಜಾಗ ತೋರಿಸಿ ಲೈಸೆನ್ಸ್ ಪಡೆದ ಬಳಿಕ ಆ ಜಾಗವನ್ನು ನಿಯಮ ಬಾಹಿರವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು, ಅವರಿಗೆ ನೋಟಿಸ್ ಕೊಡುವ ಕಾರ್ಯ ಮಾಡಿದ್ದೇವೆ.
ಪ್ರತಿನಿತ್ಯ ಸಂಚಾರ ನಿಯಂತ್ರಣ ಕಷ್ಟವಾಗುತ್ತಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಠಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಾಗರಿಕರು, ಕಟ್ಟಡ ಮಾಲೀಕರು, ಬೀದಿ ಬದಿ ವ್ಯಾಪಾರಸ್ಥರು ಸಹಕರಿಸಬೇಕೆಂದರು.ಕನ್ಸರ್ ವೆನ್ಸಿಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿದ ಟಾಯ್ಲೆಟ್ ಗಳು, ನೀರು ಮತ್ತು ವಿದ್ಯುತ್ ಇಲ್ಲದೇ ಉಪಯೋಗಕ್ಕೆ ಚಾಲನೆ ದೊರೆತಿರಲಿಲ್ಲ. ಈಗ ಎಲ್ಲಾ ವ್ಯವಸ್ಥೆ ಕಲ್ಪಿಸಿದ್ದೇವೆ. ಶೀಘ್ರದಲ್ಲೇ ನಿರ್ವಹಣೆ ಟೆಂಡರ್ ಕರೆದು ಎಲ್ಲಾ ಸಾರ್ವಜನಿಕ ಶೌಚಾಲಯಗಳನ್ನು ಬಳಕೆಗೆ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ಆಡಳಿತ ಪಕ್ಷ ನಾಯಕ ಚನ್ನಬಸಪ್ಪ, ಬಿಜೆಪಿ ಮುಖಂಡರಾದ ಡಿ. ಜೆ. ಕಿರಣ್, ಗೋವಿಂದರಾಜು ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.