ಶಿವಮೊಗ್ಗ : ನಮ್ಮ ಮುಂದಿನ ಪ್ರಜೆಗಳನ್ನು ರೂಪಿಸುವ ಶಿಕ್ಷಕ ಸಮೂಹ ಸಾಮಾಜಿಕ ಅಗತ್ಯತೆಗೆ ತಕ್ಕಂತೆ ಶೈಕ್ಷಣಿಕ ಬೋಧನಾ ವಿಧಾನ ಅಳವಡಿಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.
ಗುರುವಾರ ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಅಧ್ಯಯನ ಕೇಂದ್ರದ ವತಿಯಿಂದ ಹತ್ತು ದಿನಗಳ ಕಾಲ ಏರ್ಪಡಿಸಿರುವ ದ್ವಿತೀಯ ಬಿ.ಇಡಿ ವಿದ್ಯಾರ್ಥಿಗಳ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರಿಂದ ಮಾತ್ರ ಜ್ಞಾನದ ಮೂಲ ಎಂಬ ವಾತಾವರಣ ಬದಲಾಗಿದೆ. ಹೊಸತನದ ಕಲಿಕೆಗೆ ತಂತ್ರಜ್ಞಾನ ಆಧಾರಿತ ಅನೇಕ ಸವಲತ್ತುಗಳು ಪ್ರಸ್ತುತ ಲಭ್ಯವಿದೆ. ಹಾಗಾಗಿಯೇ ಶಿಕ್ಷಕರು ತಮ್ಮ ಬೋಧನಾ ಕ್ರಮದಲ್ಲಿ ಮೌಲ್ಯಾಧಾರಿತ ನಾವಿನ್ಯಯುತ ನವೀಕರಣ ಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
ಪಾಠ ಹೇಳುವ ವ್ಯಕ್ತಿತ್ವ ಎಂದೂ ಕಲಿಕೆಯನ್ನು ನಿಲ್ಲಿಸಬಾರದು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣದ ಸಂಪೂರ್ಣ ಲಕ್ಷಣ ಬದಲಾಗುತ್ತಿದೆ. ಹೊಸ ತನದ ಚಿಂತನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಶಿಕ್ಷಕರು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ತರಗತಿಗಳು ಚರ್ಚಿತ ವೇದಿಕೆಯಾಗಿ ರೂಪಗೊಳ್ಳಬೇಕಿದೆ. ಆಗ ಮಾತ್ರ ಪರಿಣಾಮಕಾರಿ ಕಲಿಕೆಗೆ ಪೂರಕವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಹಾಗೂ ಕೆಎಸ್ಒಯು ಬಿ.ಎಡ್ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ಎನ್. ಕೆ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾದ್ಯಾಪಕ ಡಾ.ಮಂಜು.ಎನ್.ಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.