ಶಿವಮೊಗ್ಗ: ನಿಸ್ವಾರ್ಥ ಸೇವೆಯೇ ಸಾರ್ಥಕ ಬದುಕಿನ ಸನ್ಮಾರ್ಗ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಪ್ರತಿಪಾದಿಸಿದರು.ನಗರದ ಆಲ್ಕೊಳ ನಂದಿನಿ ಬಡಾವಣೆಯ ತಾಯಿಮನೆ ಅನಾಥಾಶ್ರಮದಲ್ಲಿ ಗುರುವಾರ ಜಗಳೂರು ತಾಲ್ಲೂಕಿನ ‘ತುಪ್ಪದಹಳ್ಳಿಯ ಜಿ.ಹನುಮಂತಪ್ಪ ಸಮಾಜ ಸ್ಪಂದನಾ ಟ್ರಸ್ಟ್’ ಮಾಜಿ ಛೇರ್ಮನ್ ದಿ.ಹನುಮಂತಪ್ಪ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪಯೋಗಿಸದೇ ಇಟ್ಟಿರುವ ವಸ್ತುಗಳನ್ನು ನೀಡುವುದು ಸೇವೆಯಲ್ಲ. ದುಡಿಮೆಯ ಒಂದಷ್ಟು ಹಣ, ಬದುಕಿನ ಸಮಯ ಮೀಸಲಿಡುವುದೇ ನಿಜವಾದ ಸೇವೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕು. ಅದು ಸಾಧ್ಯವಾಗದಿದ್ದರೆ ನಮ್ಮಿಂದ ಬೇರೆಯವರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು. ಅಂತಹ ನಡವಳಿಕೆ ಸಮಾಜಕ್ಕೆ ಒಳಿತು ಮಾಡುತ್ತದೆ ಎಂದರು.ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ‘ರಾಗ, ದ್ವೇಷ, ಅಸೂಯೆ, ಮದ, ಮಾತ್ಸರ್ಯ ತುಂಬಿಕೊಂಡ ಸಮಾಜ ಎಂದಿಗೂ ಒಂದುಗೂಡಲು ಸಾಧ್ಯವಿಲ್ಲ. ಅದು ಸದಾ ಛಿದ್ರವಾಗುತ್ತಲೇ ಹೋಗುತ್ತದೆ. ಪ್ರೀತಿಯಿಂದ ದೇಶ, ಸಮಾಜ ಕಟ್ಟಬೇಕು. ಅಸೂಯೆಗೆ ತಿಲಾಂಜಲಿ ಇಡಬೇಕು. ಸೇವೆಗೆ ಅನರ್ಥನಾಮ ಎನ್ನುವ ರೀತಿ ಪುನೀತ್ ರಾಜ್ಕುಮಾರ್ ಅಮರವಾಗಿದ್ದಾರೆ.

ಅವರ ಹಾದಿ ಇತರರಿಗೂ ಮಾದರಿಯಾಗಬೇಕು. ನೀಡಿದ ದಾನ ಇನ್ನೊಬ್ಬರಿಗೂ ಗೊತ್ತಾಗದಂತೆ ನಡೆದುಕೊಳ್ಳುವುದೂ ಮುಖ್ಯ’ ಎಂದು ಕಿವಿಮಾತು ಹೇಳಿದರು. ಮನುಷ್ಯ ತಾನು ಹಿಂದೆ ನಡೆದು ಬಂದ ದಾರಿ ಮರೆಯಬಾರದು. ಆಗ ಮಾತ್ರ ಕಷ್ಟದಲ್ಲಿರುವ ಸಮಾಜದ ಜನರಿಗೆ ನೆರವಾಗಲು ಸಾಧ್ಯ. ದುಡಿದ ಹಣದ ಒಂದಷ್ಟು ಭಾಗ ದಾನ ನೀಡುವ ಸಂಕಲ್ಪ ಮಾಡಬೇಕು’ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಎಂ.ಎಚ್. ಪ್ರಹ್ಲಾದಪ್ಪ, ‘ಹನುಮಂತಪ್ಪ ಅವರು ಬಸವಣ್ಣನವರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು. ಜೀವನದ ಉದ್ದಕ್ಕೂ ಕಾಯಕ ನಿಷ್ಠೆ, ಸಾಮಾಜಿಕ, ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಅನ್ಯಾಯ, ಶೋಷಣೆಯ ವಿರುದ್ಧ ಧ್ವನಿ ಎತ್ತುತ್ತಿದ್ದರು. ಜಾತಿಯ ಎಲ್ಲೆಗಳನ್ನು ಮೀರಿ ಸಮಾಜಕ್ಕೆ ಬೆಳಕಾಗಿದ್ದರು. ಬಡವರಿಗೆ, ದುರ್ಬಲರಿಗೆ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಆಸರೆ ಒದಗಿಸಿದ್ದರು’ ಎಂದು ಸ್ಮರಿಸಿದರು.

ಈ ಸಮಯದಲ್ಲಿ ತಾಯಿ ಮನೆಯ ಮಕ್ಕಳಿಗೆ ಟ್ರಸ್ಟ್ನಿಂದ ಆರ್ಥಿಕ ನೆರವು ನೀಡಲಾಯಿತು. ಗಣ್ಯರನ್ನು ಸನ್ಮಾನಿಸಲಾಯಿತು.ನಗರ ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್, ಪತ್ರಕರ್ತರಾದ ಚಂದ್ರಹಾಸ ಹಿರೇಮಳಲಿ, ಸಂತೋಷ್ ಕಾಚಿನಕಟ್ಟೆ, ತಾಯಿಮನೆ ಮುಖ್ಯಸ್ಥ ಸುದರ್ಶನ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…