ದೇಶದ ಆರ್ಥಿಕತೆಗೆ ಚೈತನ್ಯ ತುಂಬುವುದರ ಜೊತೆಗೆ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿ ಹೊಂದಿರುವ ಕೇಂದ್ರದ #ಬಜೆಟ್‌2022 ನಿಜಕ್ಕೂ ಸ್ವಾಗತ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಧ್ಯಕ್ಷ ಎಸ್ ದತ್ತಾತ್ರಿ ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ ಕೇಂದ್ರ ಬಜೆಟ್ ದೂರದರ್ಶಿತ್ವದ ಚಿಂತನೆಯೊಂದಿಗೆ ಅಭಿವೃದ್ಧಿ ಪರ ಅತ್ಮನಿರ್ಭರ ಬಜೆಟ್ ಆಗಿದೆ. ಉತ್ಪಾದಕತೆ, ಹಣಕಾಸು ಹೂಡಿಕೆ, ಹವಾಮಾನ ಕ್ರಮ ಮತ್ತು ಪಿಎಂ ಗತಿಶಕ್ತಿ ಯೋಜನೆ ಈ ನಾಲ್ಕು ಆಧಾರ ಸ್ತಂಭಗಳಲ್ಲಿ ರೂಪಿಸಿರುವ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ.

ಕೇಂದ್ರ ಬಜೆಟ್ನಲ್ಲಿ ಎಂಎಸ್ಎಂಇ ಹಾಗೂ ತೆರಿಗೆ ಕ್ಷೇತ್ರದಲ್ಲಿ ತಂದಿರುವ ಬದಲಾವಣೆಗಳು ಆರ್ಥಿಕ ಸುಧಾರಣೆಗೆ ಪೂರಕವಾಗಿವೆ. “ಎಸ್ಎಂಇ” ವಲಯವು ಬೆಲೆ ಏರಿಕೆಯಿಂದ ಶೇ.85 ರಷ್ಟು ಹಾಗೂ ಕೋವಿಡ್ನಿಂದ ಶೆ.15ರಷ್ಟು ಸಮಸ್ಯೆಗೆ ಒಳಗಾಗಿತ್ತು. ಇಂತಹ ಸಂದರ್ಭದಲ್ಲಿ ಸಾಲ ಹಾಗೂ ಕ್ರೆಡಿಟ್ ಗ್ಯಾರಂಟಿ ನೀಡುವುದರಿಂದ 2 ಲಕ್ಷ ಕೋಟಿ ರೂ.ಗಳ ತನಕ ನೆರವು ನೀಡಲು ಯೋಜನೆ ರೂಪಿಸಲಾಗಿದೆ.

ಇದರಿಂದ ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳಿಗೆ ದುಡಿಯುವ ಬಂಡವಾಳ ಸಿಗುತ್ತದೆ. ಕೋವಿಡ್ನಿಂದ ನಷ್ಟವಾಗಿದ್ದ ಉದ್ಯೋಗದ ಅವಕಾಶಗಳನ್ನು ಮತ್ತೆ ತುಂಬಿಕೊಳ್ಳಲು ಅನುಕೂಲವಾಗುತ್ತದೆ. ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳು ಸರಬರಾಜು ಮಾಡುವ ಉತ್ಪನ್ನಗಳಿಗೆ ಬಿಲ್ ಬರುವುದು ತಡವಾಗುತ್ತಿತ್ತು. ಈಗ ಅದನ್ನು 11 ದಿನಕ್ಕೆ ಇಳಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದು ಜಾರಿಯಾದರೆ ಸಣ್ಣ ಕೈಗಾರಿಕೆ ವಲಯ ಉಸಿರಾಟ ಮಾಡಲು ಅನುಕೂಲವಾಗುತ್ತದೆ.

“ಒನ್ ಸ್ಟೇಷನ್ ಒನ್ ಪ್ರಾಡಕ್ಟ್” ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದರಿಂದ ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗುತ್ತವೆ. 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕ್ ಸ್ಥಾಪನೆ ಮಾಡುವುದು ಸಹ ಆರ್ಥಿಕ ಚಟುವಟಿಕೆಗಳಿಗೆ ಸಹಕಾರಿಯಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಲಸಿಕೆ ಮೂಲಕ ಜೀವ ಉಳಿಸಲಾಯಿತು. ಈಗ ಜೀವನೋಪಾಯ ವೃದ್ಧಿಯ ಕಡೆ ಗಮನ ಹರಿಸಲಾಗಿದೆ.

“ಗತಿಶಕ್ತಿ ಯೋಜನೆಯು” ದೇಶದ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಒಂದು ಐತಿಹಾಸಿಕ ಹೆಜ್ಜೆ ಯಾಗಿದೆ. ಒಟ್ಟಾರೆ ದೇಶದ ಯುವಜನತೆಯ ಭವಿಷ್ಯಕ್ಕೆ ಹೊಸ ಬೆಳಕು ನೀಡುವ ಬಜೆಟ್ ಇದಾಗಿದೆ.

ವರದಿ ಮಂಜುನಾಥ್ ಶೆಟ್ಟಿ…