ಶಿವಮೊಗ್ಗ: ಕೇಂದ್ರ ಸರ್ಕಾರದ ಬಜೆಟ್‌ನಿಂದ ಬಡವರು, ಮಧ್ಯಮ ವರ್ಗದವರು, ಯುವಸಮೂಹ ಹಾಗೂ ರೈತರಿಗೆ ಸೇರಿದಂತೆ ಯಾರಿಗೂ ಪ್ರಯೋಜವಿಲ್ಲದ ಬಜೆಟ್ ಮಂಡಿಸಲಾಗಿದೆ. ಅತ್ಯಂತ ನಿರಾಶಾದಾಯಕ ಬಜೆಟ್ ಇದಾಗಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಚೇತನ್ ದೂರಿದ್ದಾರೆ.

ಕೇಂದ್ರ ಸರ್ಕಾರದ 2022-23ನೇ ಸಾಲಿನ ಬಜೆಟ್ ಕುರಿತು ಪ್ರತಿಕ್ರಿಯಿಸಿ, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿ ಎಂದು ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಸರ್ಕಾರ ಈ ಬಜೆಟ್‌ನಲ್ಲಿ 5 ವರ್ಷಕ್ಕೆ ಕೇವಲ 60 ಲಕ್ಷ ಉದ್ಯೋಗ ಸೃಷ್ಠಿಯ ಬಗ್ಗೆ ಪ್ರಸ್ತಾಪಿಸಿ ಭಾರಿ ನೀರಿಕ್ಷೆ ಇಟ್ಟುಕೊಂಡಿದ್ದ ಯುವ ಸಮೂಹಕ್ಕೆ ಅನ್ಯಾಯ ಎಸಗಿದೆ ಎಂದು ದೂರಿದರು.

ನಿರುದ್ಯೋಗ, ಹಣದುಬ್ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ಬಜೆಟ್‌ನಲ್ಲಿ ಏನೂ ಸಿಕ್ಕಿಲ್ಲ. ಜನಸಾಮಾನ್ಯರು, ಬಡವರು, ಮಧ್ಯಮ ವರ್ಗ, ಕೂಲಿ ಕಾರ್ಮಿಕರು, ರೈತರು ಹಾಗೂ ಕೈಗಾರಿಕಾ ವಲಯಕ್ಕೂ ಯಾವುದೇ ಅನುಕೂಲಗಳು ಇಲ್ಲದ ಬಜೆಟ್ ಇದಾಗಿದೆ ಎಂದು ಆರೋಪಿಸಿದರು.

ರೈತರಿಗೆ ಯಾವುದೇ ಉಪಯುಕ್ತ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಡೆಸುತ್ತ ಸಂಕಷ್ಟದಲ್ಲಿರುವವರಿಗೆ ನೆರವಾಗುವಂತಹ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಪ್ರಸ್ತಾಪಿಸಿಲ್ಲ. ಒಟ್ಟಾರೆ ನಿರಾಶಾದಾಯಕ ಬಜೆಟ್ ಇದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…