ಶಿವಮೊಗ್ಗ: ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಪರೇಟರ್ ಗಳು/ ಜಿಲ್ಲಾ ಸಮಾಲೋಚಕರನ್ನು ಕರ್ತವ್ಯದಲ್ಲಿ ಮುಂದುವರೆಸಿ ಸೇವಾ ಭದ್ರತೆ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ನಾಡ ಕಚೇರಿ ಅಟಲ್ ಜೀ ಜನಸ್ನೇಹಿ ಕೇಂದ್ರ ನೌಕರರ ಸಂಘದ ಸದಸ್ಯರು ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸುಮಾರು 10 ವರ್ಷಗಳಿಂದ ರಾಜ್ಯಾದ್ಯಂತ ನಾಡಕಚೇರಿಗಳಲ್ಲಿ ಡೇಟಾ ಎಂಟ್ರಿ ಆಪರೇಟರ್ ಗಳು ಮತ್ತು ಸಮಾಲೋಚಕರು ಯಾವುದೇ ಸೇವಾ ಭದ್ರತೆ ಇಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. 2006 ರ ನೆಮ್ಮದಿ ಯೋಜನೆಯಿಂದ ಈಗಿನ ಅಟಲ್ ಜೀ ಯೋಜನೆಯವರೆಗೆ ಸತತ 14 ವರ್ಷಗಳ ಕಾಲ ಕಂದಾಯ ಇಲಾಖೆಯ ಅಟಲ್ ಜೀ ಕೇಂದ್ರಗಳಲ್ಲಿ ಹಗಲೀರುಳು ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ. ನಮ್ಮ ರಾಜ್ಯಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ಸಹ ಬಂದಿರುತ್ತದೆ ಎಂದರು.ಸರ್ಕಾರದ ವಿವಿಧ ಯೋಜನೆಗಳು ಮತ್ತು ಹಲವಾರು ಹೊಸ ಹೊಸ ಸೇವೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಯಶಸ್ವಿಯಾಗಿ ಸಾರ್ವಜನಿಕರ ಪ್ರಶಂಸೆಗೆ ಮತ್ತು ಪಾರದರ್ಶಕತೆಗೆ ಪಾತ್ರರಾಗಿದ್ದೇವೆ.

ಕೋವಿಡ್ ತುರ್ತು ಸಂದರ್ಭದಲ್ಲಿ ಫ್ರಂಟ್ ವಾರಿಯರ್ಸ್ ಆಗಿ ಸರ್ಕಾರದ ವಿವಿಧ ಶಾಖೆಗಳಲ್ಲಿ ಕೆಲಸ ನಿರ್ವಹಿಸಿದ್ದೇವೆ. ಬೆಳೆ ಸಮೀಕ್ಷೆ ಕೆಲಸ ಮಾಡಿದ್ದೇವೆಎಂದು ತಿಳಿಸಿದರು.ಸರ್ಕಾರದ ವಿವಿಧ 800 ಸೇವೆಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರದಿಂದಲೇ ನೀಡಬೇಕೆಂದು ಆಯೋಗ 2 ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅಲ್ಪ ಮೊತ್ತದ ವೇತನ ಪಡೆದು ಸಾರ್ವಜನಿಕರ ಸೇವೆ ಸಲ್ಲಿಸುತ್ತಾ ಬಂದಿರುವ 1950 ಆಪರೇಟರ್ ಗಳು, 42 ಜಿಲ್ಲಾ ಸಮಾಲೋಚಕರು ಇದೇ ಕೆಲಸ ನಂಬಿ ಜೀವನ ನಡೆಸುತ್ತಿದ್ದು, ಎಲ್ಲರಿಗೂ ವಯೋಮಿತಿ ಮೀರಿದ್ದು, ಜೀವನ ದುಸ್ತರವಾಗಿರುತ್ತದೆ ಎಂದು ಅಳಲು ತೋಡಿಕೊಂಡರು.

ಈಗ ಗ್ರಾಮ ಒನ್ ಸೇವೆ ಪ್ರಾರಂಭವಾದ ಮೇಲೆ ನಾಡಕಚೇರಿಯಲ್ಲಿ ಕೆಲಸ ಮಾಡುವ ಆಪರೇಟರ್ ಗಳಿಗೆ ಸೇವಾ ಭದ್ರತೆಯ ಆತಂಕ ಕಾಡಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರ ನಮ್ಮ ಕುಟುಂಬಗಳ ಜೀವನಾಧಾರ ಮೂಲವಾಗಿದ್ದು, ನಮ್ಮಗಳಿಗೆ ಸೇವಾ ಭದ್ರತೆ ನೀಡಿ ಸೇವೆ ಮುಂದುವರೆಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ರಾಘವೇಂದ್ರ, ತುಕಾರಾಂ, ವಿಜಯಕುಮಾರಿ, ವೀಣಾ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…