ಶಿವಮೊಗ್ಗ : ಸ್ವಾರ್ಥ ರಹಿತ ಸೇವೆಯೇ ಸಂಘ ಸಂಸ್ಥೆಯ ಸಂಘಟನಾ ಶಕ್ತಿ ಎಂದು ವಿಧಾನಪರಿಷತ್ತಿನ ಸದಸ್ಯರಾದ ಡಿ.ಎಸ್.ಅರುಣ್ ಅಭಿಪ್ರಾಯಪಟ್ಟರು.

ಇಂದು ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯ ಹಾಗೂ ಜೆ.ಎನ್.ಎನ್.ಸಿ.ಇ ಕಾಲೇಜಿನೊಂದಿಗೆ ಮೂರು ವರ್ಷಗಳ ಒಡಂಬಡಿಕೆ ಮಾಡಿಕೊಂಡ ನಂತರ ಮಾತನಾಡಿದ ಅವರು ಯಾವುದೇ ಸಂಘಟನಾ ಚಟುವಟುಕೆಗಳಿಗೆ ನಮ್ಮನ್ನು ತೆರೆದುಕೊಳ್ಳುವ ಮೊದಲು ವಿಷಯಾಧಾರಿತ ಸಾಮಾನ್ಯ ಜ್ಞಾನ ಮತ್ತು ಸ್ವಾರ್ಥ ರಹಿತ ಮನೋಭಾವ ಅತ್ಯವಶ್ಯಕ. ಸಾರ್ವಜನಿಕ ಬದುಕಿನಲ್ಲಿ ಸೋಲೆಂಬುದು ನಿರಂತರ ಪಾಠವಾಗಿದ್ದು ಎದುರಿಸಿ ನಿಂತಾಗ ಮಾತ್ರ ಸಾಧನೆಯ ಗುರಿ ತಲುಪಲು ಸಾಧ್ಯ.

ಪ್ರಾದೇಶಿಕವಾಗಿ ನಮ್ಮ ನಡುವೆ ಅನೇಕ ಕ್ರಿಕೆಟ್ ಆಟಗಾರರು ರೂಪಗೊಳ್ಳುತ್ತಿದ್ದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಕ ಇಂತಹ ಪ್ರತಿಭಾನ್ವಿತರಿಗೆ ಪೂರಕ ವೇದಿಕೆಗಳನ್ನು ನೀಡಲಾಗುತ್ತಿದೆ. ಎಂಟು ವರ್ಷಗಳ ಹಿಂದೆ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಪಂದ್ಯಾವಳಿಗೆ ಆಗಮಿಸಿದ್ದ ಆಟಗಾರರು ಲಂಡನ್ ಕೌಂಟಿ ಕ್ರಿಕೆಟ್ ಮೈದಾನದಂತಿದೆ ಎಂದು ಬಣ್ಣಸಿದ್ದರು. ಇಂತಹ ಅದ್ಭುತ ಕ್ರೀಡಾಂಗಣದಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಸಂಘಟಿಸುವ ಅಭಿಲಾಷೆ ನಮ್ಮದಾಗಿದೆ‌ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ, ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಖಜಾಂಚಿಗಳಾದ ಸಿ.ಆರ್.ನಾಗರಾಜ ಮಾತನಾಡಿದರು. ಕುಲಸಚಿವರಾದ ಪ್ರೊ.ಹೂವಯ್ಯಗೌಡ, ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರ ಪ್ರಸಾದ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ದೈಹಿಕ ಶಿಕ್ಷಣ ನಿರ್ದೇಶಕರಾದ ಚೇತನ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…