ಶಿವಮೊಗ್ಗ: ಸಮಾನ ಸಮವಸ್ತ್ರ ಸಂಹಿತೆ ಜಾರಿ ಮಾಡಬೇಕೆಂದು ಆಗ್ರಹಿಸಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಕಾಲೇಜಿನಲ್ಲಿ ಸಮಾನ ಸಮವಸ್ತ್ರ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿ ಎಲ್ಲರಿಗೂ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಈಗಾಗಲೇ ಸಮವಸ್ತ್ರ ಸಂಹಿತೆ ಜಾರಿಯಲ್ಲಿದ್ದರೂ, ಹಲವಾರು ವಿದ್ಯಾರ್ಥಿನಿಯರು ಕಾಲೇಜಿಗೆ ಸಮವಸ್ತ್ರ ಧರಿಸದೇ ನಿಯಮ ಉಲ್ಲಂಘಿಸಿ ಬರುತ್ತಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಸಾಮರಸ್ಯದ ಸಮಾನತೆ ಶಿಕ್ಷಣ ನೀಡುವ ಕುರಿತು ಕ್ರಮಕೈಗೊಳ್ಳುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.ರಾಜ್ಯದ ಕೆಲವು ಕಾಲೇಜ್ ಗಳಲ್ಲಿ ಹಿಜಾಬ್ ವಿವಾದ ಭುಗಿಲೇಳುತ್ತಿದ್ದಂತೆ ಇಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕ್ಲಾಸ್ ರೂಂ ಪ್ರವೇಶಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಕೇಸರಿ ಶಾಲು ತೆಗೆದು ತರಗತಿಗೆ ಬನ್ನಿ ಎಂದು ಪ್ರಾಂಶುಪಾಲರು ಸೂಚಿಸಿದ್ದಾರೆ. ಆ ಸಂದರ್ಭದಲ್ಲಿ ಹಾಗಾದರೆ ತರಗತಿಗೆ ಹಿಜಾಬ್ ಧರಿಸಿ ಬರಬಾರದು.

ಕಾಲೇಜಿನಲ್ಲಿ ಸಮಾನ ವಸ್ತ್ರ ಸಂಹಿತೆ ಪಾಲಿಸಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಘೋಷಣೆ ಕೂಗುತ್ತಾ ಕಾಲೇಜಿನಿಂದ ಹೊರಬಂದರು.ಹಿಜಾಬ್ ಧರಿಸಿಕೊಂಡೇ ತರಗತಿಗೆ ಬರುವುದಾಗಿ ಪಟ್ಟು ಹಿಡಿದ ಮುಸ್ಲಿಂ ವಿದ್ಯಾರ್ಥಿನಿಯರಿಗೂ ಕೂಡ ಪ್ರವೇಶ ನಿರಾಕರಿಸಲಾಯಿತು. ಕುವೆಂಪು ವಿಶ್ವವಿದ್ಯಾಲಯದ ಆಡಳಿತಕ್ಕೆ ಒಳಪಟ್ಟ ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ವಿವಿ ಆದೇಶದಂತೆ ನಡೆದುಕೊಳ್ಳಲಾಗುವುದು. ಅಲ್ಲಿಂದ ಸೂಕ್ತ ಆದೇಶ ಬರುವವರೆಗೆ ಹಿಜಾಬ್ ಮತ್ತು ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಬರಲು ಅವಕಾಶ ನೀಡುವುದಿಲ್ಲ. ವಿದ್ಯಾರ್ಥಿಗಳ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ಈಗಾಗಲೇ ತರಲಾಗಿದೆ ಎಂದು ಪ್ರಾಂಶುಪಾಲೆ ಡಾ. ವೀಣಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಹ್ಯಾದ್ರಿ ಕಾಲೇಜ್ ನಲ್ಲಿ 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ವಾಣಿಜ್ಯ ಕಾಲೇಜಿನಲ್ಲೇ 2500 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಮನವೊಲಿಸಿಯೇ ಸಮಾನ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಹಿಜಾಬ್ ಧರಿಸಿ ಬಂದವರು ಅವರಿಗೆ ಮೀಸಲಾದ ರೂಂನಲ್ಲಿ ಅದನ್ನು ತೆಗೆದಿಟ್ಟು ತರಗತಿಗೆ ಹಾಜರಾಗಲು ಮೊದಲಿನಿಂದಲೂ ಅವಕಾಶ ನೀಡಲಾಗಿದೆ. ಆದರೆ, ಅದನ್ನು ಧರಿಸಿಯೇ ತರಗತಿಗೆ ಬರುತ್ತೇವೆ ಎಂದು ಪಟ್ಟು ಹಿಡಿದವರಿಗೆ ಮತ್ತು ಅದಕ್ಕೆ ವಿರುದ್ಧವಾಗಿ ಕೇಸರಿ ಶಾಲು ಧರಿಸಿ ತರಗತಿಗೆ ಬರುತ್ತೇವೆ ಎಂದವರಿಗೂ ಪ್ರವೇಶ ನಿರಾಕರಿಸಿದ್ದೇವೆ ಎಂದು ಅವರು ಸ್ಪಷ್ಠೀಕರಣ ನೀಡಿದರು.ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಈ ಹೈಡ್ರಾಮಾದ ಬಳಿಕ ಕೆಲವು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮನೆ ದಾರಿ ಹಿಡಿದರೆ ಮತ್ತೆ ಕೆಲವರು ತರಗತಿಗೆ ಹಾಜರಾದರು. ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ಕೆಲವರು ಹಿಜಾಬ್ ಪರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…