
ಶಿವಮೊಗ್ಗ: ದುರುದ್ದೇಶದಿಂದ ಅಣ್ಣನೇ ತಮ್ಮನ ಕೊಲೆ ಮಾಡಲು ಯತ್ನಿಸಿ ಟ್ರಾಕ್ಟರ್ ಹತ್ತಿಸಲು ಯತ್ನಿಸಿದಲ್ಲದೇ, ಕಲ್ಟಿವೇಟರ್ನಿಂದ ಗಂಭೀರವಾಗಿ ಗಾಯಗೊಳಿಸಿದ ಘಟನೆ ಸಮೀಪದ ಮೇಲಿನ ಹನಸವಾಡಿಯಲ್ಲಿ ನಡೆದಿದೆ.

ಮೇಲಿನ ಹನಸವಾಡಿಯ ವೇದಮೂರ್ತಿ ಅವರ ಮಗ ಗೌತಮ್(21) ಗಾಯಗೊಂಡವರು. ಬಲಗಾಲ ಮೇಲೆ ಟ್ರಾಕ್ಟರ್ ಹತ್ತಿಸಿರುವ ಇಂಜಿನಿಯರ್ ಪದವೀಧರ ಹಾಗೂ ವೇದಮೂರ್ತಿ ಅಣ್ಣನ ಮಗ ವಿನಯ್ ಕುಮಾರ್ ಟ್ರಾಕ್ಟರ್ಗೆ ಅಳವಡಿಸಿದ್ದ ಕಲ್ಟಿವೇಟರ್ನಿಂದ ಸಾಕಷ್ಟು ಬಾರಿ ತಿವಿಸಿದ್ದು, ಬೆನ್ನು ಹಾಗೂ ಎದೆ ಭಾಗಕ್ಕೆ ಬಲವಾದ ಹೊಡೆತ ಬಿದ್ದಿದೆ. ಹಾಗೆಯೇ ರಿಂಗ್ ಸ್ಪಾನರ್ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ.

ಸಹೋದರರರ ಮಕ್ಕಳ ನಡುವಿನ ಈ ಜಗಳಕ್ಕೆ ಜಮೀನು ವಿವಾದ ಕಾರಣವೆನ್ನಲಾಗಿದೆ. ಗೌತಮ್ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿ ಬಂಧನಕ್ಕೆ ಹಾಗೂ ಟ್ರಾಕ್ಟರ್ ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.