ಶಿವಮೊಗ್ಗ: ಶಿವಮೊಗ್ಗದಲ್ಲಿ ಕೇವಲ ಸಮವಸ್ತ್ರ ವಿವಾದವಲ್ಲ, ಇದು ರಾಷ್ಟ್ರದ್ರೋಹಿ ಶಕ್ತಿಗಳ ಹಿಡನ್ ಅಜೆಂಡಾ ಆಗಿದ್ದು, ಹೊಸದೊಂದು ವಿವಾದ ಸೃಷ್ಠಿಸಿ ಕೋಮು ಭಾವನೆ ಪ್ರಚೋದಿಸುವ ಷಡ್ಯಂತ್ರ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಆರೋಪಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ರಾಜ್ಯದ ಎಲ್ಲಾ ಶಾಲಾ, ಕಾಲೇಜ್ ಗಳಿಗೆ ಸಮವಸ್ತ್ರದ ನೀತಿ ಪ್ರಕಟಿಸಿದ್ದು, ಜಿಲ್ಲಾ ಬಿಜೆಪಿ ಇದನ್ನು ಸ್ವಾಗತಿಸುತ್ತದೆ. ಆ ಸಮವಸ್ತ್ರ ನೀತಿ ವಸ್ತುನಿಷ್ಠವಾಗಿ ಜಾರಿಗೆ ತರುವುದು ಆಯಾ ಕಾಲೇಜ್ ಆಡಳಿತ ಮಂಡಳಿಗಳ ಕರ್ತವ್ಯವಾಗಿದೆ. ಮತ್ತು ಅದನ್ನು ಜಾರಿಗೆ ತರಲು ಜಿಲ್ಲಾ ಬಿಜೆಪಿ ಆಗ್ರಹಿಸುತ್ತದೆ ಎಂದರು.ರಾಜಕೀಯವಾಗಿ ತನ್ನ ಶಕ್ತಿ ವೃದ್ಧಿಗಾಗಿ ಮತ್ತು ವಿದ್ಯಾರ್ಥಿ ಸ್ತರಕ್ಕೆ ಕೊಂಡೊಯ್ಯಲು ಎಸ್.ಡಿ.ಪಿ.ಐ. ದುರಾಲೋಚನೆ ಮಾಡಿ ಶೈಕ್ಷಣಿಕ ಸಂಸ್ಥೆಯಲ್ಲಿ ವಿದ್ಯಾ ದೇಗುಲದಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಂಡು ಇಂತಹ ಕೋಮುದ್ವೇಷ ಬಿತ್ತುತ್ತಿರುವುದು ಖಂಡನೀಯವಾಗಿದ್ದು, ಮೇಲ್ನೋಟಕ್ಕೆ ಇದು ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಎನ್ನಿಸಿದ್ದರೂ ಇದರ ಹಿಂದೆ ಪಿಎಫ್ಐ, ಸಿಎಫ್ಐ ಮತ್ತು ಎಸ್.ಡಿ.ಎಫ್.ಐ. ಇದ್ದು ವಿದ್ಯಾರ್ಥಿ ಸಮೂಹಕ್ಕೆ ಜಾತಿ ಧರ್ಮದ ವಿಷ ಬೀಜ ಬಿತ್ತುತ್ತಿದೆ. ಇದನ್ನು ಕೂಡಲೇ ತನಿಖೆಗೊಳಪಡಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅವರು ಆಗ್ರಹಿಸಿದರು.

ನ್ಯಾಯಾಂಗ ವ್ಯವಸ್ಥೆಯನ್ನು ಭಾರತದ ಎಲ್ಲಾ ಪ್ರಜೆಗಳು ಗೌರವಿಸಬೇಕು. ಕೋರ್ಟ್ ಆದೇಶ ಬರಲಿ, ಅದಕ್ಕೂ ಮುನ್ನ ಏಕಾಏಕಿ ಗಲಭೆ ಎಬ್ಬಿಸಿರುವುದು ಇದು ವ್ಯವಸ್ಥಿತ ಪೂರ್ವಯೋಜಿತ ಕೃತ್ಯ. ಇದಕ್ಕಾಗಿ ಆಯ್ದ ಕೆಲವು ಧಾರ್ಮಿಕ ಸ್ಥಳಗಳಲ್ಲಿ ತಯಾರಿ ನಡೆದಿರುವುದರ ಬಗ್ಗೆ ಸಿಸಿ ಕ್ಯಾಮೆರಾ ಆಧರಿಸಿ ತನಿಖೆಗೆ ಒಳಪಡಿಸಬೇಕು. ಈಗಾಗಲೇ ಒಂದು ಕೋಮಿನ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎರಡನೇ ಮಹಡಿಯಿಂದ ಇನ್ನೊಂದು ಕೋಮಿನ ವಿದ್ಯಾರ್ಥಿಗಳ ಮೇಲೆ ಕಲ್ಲೆಸೆದಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಆರೋಪಿಗಳು ಪತ್ತೆಯಾಗಿದ್ದಾರೆ. ಕಲ್ಲು ತೂರಾಟ ಮಾಡಿದ ಮತ್ತು ಪ್ರಚೋದನೆ ನೀಡಿದ ಆರೋಪಿಗಳನ್ನು ಬಂಧಿಸಬೇಕು. ಮತತ್ಉ ಪಿಎಫ್ಐ, ಸಿಎಫ್ಐ, ಎಸ್.ಡಿ.ಪಿ.ಐ. ಸಂಘಟನೆಗಳ ಮೇಲೆ ನಿಗಾವಹಿಸಬೇಕೆಂದು ಅವರು ಆಗ್ರಹಿಸಿದರು.ರಾಷ್ಟ್ರದ್ರೋಹಿಗಳು ವಿವಾದದ ಕೇಂದ್ರವಾಗಿದ್ದು, ಪಾಕಿಸ್ತಾನದ ಪರ ಘೋಷಣೆ, ವಾಯ್ಡ್ ರೆಕಾರ್ಡ್ ಮತ್ತು ಪಾಕಿಸ್ತಾನ ಧ್ವಜ ಹಿಡಿದುಕೊಂಡು ವಾಟ್ಸಾಪ್ ಗ್ರೂಪ್ ಗಳಲ್ಲಿ ಕೋಮು ಭಾವನೆ ಹರಿದಾಡಿಸಿ ಪ್ರಚೋದನೆ ನೀಡುತ್ತಿರುವ ವಾಟ್ಸಾಪ್ ಗ್ರೂಪ್ ಗಳ ದಾಖಲೆಗಳನ್ನು ಅವರು ಪ್ರದರ್ಶಿಸಿದರು.

ಹಿಂದೂ ಸಂಘಟನೆಗಳ ಹೆಸರಿನಲ್ಲಿ ನಕಲಿ ವಾಟ್ಸಾಪ್ ಗ್ರೂಪ ಸೃಷ್ಠಿಸಿ ಒಂದು ಧರ್ಮದ ವಿರುದ್ಧ ಅವಾಚ್ಯ ನಿಂದನೆ ಪದಗಳನ್ನು ಬಳಸಿ ಧರ್ಮದ ವಿರುದ್ಧ ಸಂಗತಿಗಳನ್ನು ಪ್ರಕಟಿಸಿ ಹರಿಬಿಡುತ್ತಿದ್ದಾರೆ. ಇದು ಕೂಡ ಒಂದು ಷಡ್ಯಂತ್ರವಾಗಿದೆ. ಇದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ. ಯಾವುದೇ ಕಾರಣಕ್ಕೂ ಕಾಲೇಜಿನ ವಾತಾವರಣ ರಾಜಕಾರಣಕ್ಕೆ ಬಳಸಲು ಬಿಡುವುದಿಲ್ಲ. ಈಗಾಗಲೇ ಲಷ್ಕರ್ ಮೊಹಲ್ಲಾದಲ್ಲಿ ಪೊಲೀಸರು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲಿ ಗಣೇಶ್ ಮತ್ತು ಪ್ರಜ್ವಲ್ ಎನ್ನುವ ಸಹೋದರರ ಮೇಲೆ ಹಲ್ಲೆ ನಡೆದಿದೆ. ಬಾಪೂಜಿ ನಗರ ಕಾಲೇಜಿನಲ್ಲಿ ಅರ್ಜುನ್, ಮಂಜು ಮತ್ತು ಸಂಕೇತ್ ಎನ್ನುವವರ ಮೇಲೆ ಹಲ್ಲೆ ನಡೆದಿದ್ದು, ಸಾಗರದ ಕಾಲೇಜೊಂದರಲ್ಲಿ 9 ಜನರ ಮೇಲೆ ಹಲ್ಲೆ ಮಾಡಲಾಗಿದ್ದು, ಇವರೆಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ಮಾಡಿದವರ ಮೇಲೆ ದೂರು ದಾಖಲಿಸಿ ಬಂಧಿಸಬೇಕು. ಗಲಭೆ ನಿಯಂತ್ರಿಸಲು ಬ್ಯಾಲೆನ್ಸ್ ಗಾಗಿ ಹಿಂದೂಗಳ ಮೇಲೆ ಕೇಸ್ ಹಾಕಿದರೆ ಸಹಿಸುವುದಿಲ್ಲ. ವಿಚಿಧ್ರಕಾರಿ ಶಕ್ತಿಗಳಿಂದ ಅಶಾಂತಿ ಹರಡಿಸಿ ಸಿದ್ಧತೆ ಮಾಡಿಕೊಂಡವರ ಮುಖವಾಡ ಸಾಕ್ಷಿ ಸಮೇತ ಕಳಚಿ ಬಿದ್ದಿದ್ದು, ಮಾರಕಾಸ್ತ್ರಗಳು ಎಲ್ಲಿತ್ತು, ಯಾಕೆ ಸಂಗ್ರಹಿಸಿದ್ದರು ಎನ್ನುವುದರ ಬಗ್ಗೆ ಪೂರ್ಣ ತನಿಖೆಯಾಗಬೇಕು. ಈ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ಜಿಲ್ಲಾ ಬಿಜೆಪಿ ದೂರು ದಾಖಲಿಸಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಪ್ರಮುಖರಾದ ಎಸ್. ದತ್ತಾತ್ರಿ, ಎಸ್.ಎನ್. ಚನ್ನಬಸಪ್ಪ, ಜಗದೀಶ್, ಶ್ರೀನಾಥ್, ಶಿವರಾಜ್, ಹೃಷಿಕೇಶ್ ಪೈ, ಬಿ.ಆರ್. ಮಧುಸೂದನ್, ಕೆ.ವಿ. ಅಣ್ಣಪ್ಪ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…